Wednesday 29 February 2012

ಸೃಷ್ಟಿಕರ್ತ

ನನಗಾರು ಎಂಬ ಅರಿವಿಲ್ಲ
ನನ್ನವರ ನಾನರಿಯೆ
ಜಗವು ನನ್ನರಿಯದು
ಒಂಟಿತನ ನನಗಿಲ್ಲ
ಸ್ವಚ್ಛತೆ ತಿಳಿದಿಲ್ಲ
ತಾಯಿಯ ನಾ ಕಾಣೆ
ಗುರುವು  ದೊರೆತಿಲ್ಲ
ಅಕ್ಷರ ಜ್ಞಾನ ತಿಳಿದಿಲ್ಲ
ಹಸಿದಾಗ ಸಿಗುವ ಸಂಗಾತಿ
ಕಸದ ಬುಟ್ಟಿಯ ನಾ ಮರೆಯಲಾರೆ
ತಿಪ್ಪೆ ನೀಡಿದ ಸತ್ವವ ನಾ ಇನ್ನೂ ಮರೆತಿಲ್ಲ 
ಆ  ದೇವಗೆ ನನ್ನಲ್ಲಿ 
ಅದೇಕೋ  ಪುಟ್ಟ ಪ್ರೀತಿ 
ಪ್ರಪಂಚ ಅರಿಯದ ಕಂದಮ್ಮನೆಂಬ ಮಮತೆ 
ಯಾರಿಲ್ಲದಿದ್ದರೂ ಪ್ರತಿದಿನ 
ಸಲಹುವನು ಆ ಸೃಷ್ಟಿಕರ್ತನು ...

Tuesday 28 February 2012

ಮತ್ಸ್ಯಗಳು

 
 
ಸಾಗರದ ಅಂಚಿನಲ್ಲಿ
ನಯನದ ತಟ್ಟೆಯಲ್ಲಿ
ಗೋಚರಿಸದೆ ಸಾಗಿದೆ
ಪುಟ್ಟ ಪುಟ್ಟ ಮತ್ಸ್ಯಗಳು
 
ಹೂವಂತೆ ನಲಿದಿವೆ
ನವಿಲಂತೆ ಕುಣಿದಿದೆ
ಸಂಭ್ರಮದಿ ತೆರಳಿದಿ
ಪುಟ್ಟ ಪುಟ್ಟ ಮತ್ಸ್ಯಗಳು
 
ಉದರವು ಹಸಿದಿತ್ತು 
ತನುವು ದಣಿದಿತ್ತು 
ಸುತ್ತಲು ಹುಡುಕಿತ್ತು 
ಪುಟ್ಟ ಪುಟ್ಟ ಮತ್ಸ್ಯಗಳು 
 
 
ಸೆಳೆದಿತ್ತು ಆಹಾರದ ತುಣುಕೊಂದು 
ನಗುಮೊಗದಿ ಸಂಧಿಸಿತು 
ತೃಪ್ತಿಯ ಹೊನಲ ಚೆಲ್ಲಿತು  
ಪುಟ್ಟ ಪುಟ್ಟ ಮತ್ಸ್ಯಗಳು 
 
ಕಣ್ಣು ಮುಚ್ಚಿ ಪ್ರಾರ್ಥಿಸಿತು
ಒಮ್ಮೆ ಹೃದಯ ಕೂಗಿತು
ಜಾಲ ಬಲೆಯು ತಟ್ಟಿತು
ಪುಟ್ಟ ಪುಟ್ಟ ಮತ್ಸ್ಯಗಳು 
 
ದೇಹ ಒಮ್ಮೆ ನಲುಗಿತು
ಉಸಿರು ಒಮ್ಮೆ ಹಿಡಿಯಿತು
ನೆನಪು ಬಾರದೆ ಅತ್ತಿತು 
ಪುಟ್ಟ ಪುಟ್ಟ ಮತ್ಸ್ಯಗಳು ........... 
 
 
 
 
ಮಾನವನ ದೇಹವಿದು
ಹಲವು ರಚನೆಗಳ ಸ್ವರೂಪವು
ಒಳಗೊಳಗೇ ಹುಡುಕಾಟ
ಅಂಗಾಂಗಳ  ಸಮ್ಮಿಲನ
ಸೋತಿಲ್ಲ ಒಂದಕೊಂದು
ಆದರೂ ಒಮ್ಮೊಮ್ಮೆ ಸೋತಿವೆ
ಮರೆತಿಲ್ಲ ಕಾಯಕವ ಬೇಸರಿಸಿ
ಅರಿಯುವುದು ದೇವ ಸೃಷ್ಟಿಯ
ಕರಗುವುದು ವಿಸ್ಮಿತವಾಗಿ
ಮೂಡುವುದು ಭಾವನಾಂತರಂಗದಲ್ಲಿ
ಮೌನವಾಗಿ ಹಲವು ಪ್ರಶ್ನೆಗಳು
ಉತ್ತರದ ತಡಕಾಟ
ಕೈಗೆಟುಕದೆ ಮುಂದುವರಿದಿದೆ ............

ಅಮ್ಮ




ಹೃದಯದ ಭಾವದೊಳಗೆ
ಅವಿತಿರುವ ಇರುಳ ಛಾಯೆಯೊಳಗೆ
ನನ್ನ ನಾನು ಬಿಡಿಸಲಾರದೆ
...
ಸೋತು ಸೊರಗಿರುವೆ ಅಮ್ಮ

ಕಣ್ಣು ಕಾಣದು , ದೀಪ ಉರಿಯದು
ಒಳಗೆ ಹುದುಗಿದೆ , ನೋವ ಚರಣವು
ನಿನ್ನಲೊಮ್ಮೆ ಹೇಳಲಾರದೆ
ಮನವು ಮರುಗಿದೆ ಅಮ್ಮ

ಜಗವು ಅರಿಯದು , ದೇವ ಸಲಹನು
ಬಂಧು ಬಳಗ , ದೂರ ಸರಿವವು
ಜೀವಶಕ್ತಿ , ಮಾತೆ ನೀನು ,ಅಳಿಸು
ಹೃದಯ ಅತ್ತಿದೆ ಅಮ್ಮ ..........

Monday 27 February 2012

ಬದುಕೆಂಬ ಬಳ್ಳಿಯಲಿ ಹೊಸತನ




ನಮ್ಮೊಳಗೆ ಅವ್ಯಕ್ತವಾಗಿ ಹುದುಗಿರುವ ನೂರೊಂದು ಭಾವನೆಗಳಿಗೆ ಒಂದು ಸುಂದರ ರೂಪ ಕೊಡುವ ದಿನವೇ ನಮಗೆಲ್ಲ ಹೊಸವರುಷ. ದ್ವೇಷ , ಸುಲಿಗೆ , ಅಸೂಯೆ ,.. ಇವೆಲ್ಲವನ್ನೂ ತೊರೆದು ನಮ್ಮತನವನ್ನು ಉಳಿಸಿಕೊಳ್ಳಬೇಕು . ಮನುಷ್ಯಧರ್ಮವನ್ನು ಎತ್ತರಿಸುವುದು . ಪ್ರತಿಯೊಬ್ಬ ಮನುಷ್ಯನು ಹೊಸ ವರ್ಷಾಚರಣೆಯನ್ನು ಹೊರಗಿನ ಆಡಂಬರದ ಜೀವನಕ್ಕಾಗಿ ಮಾಡದೆ ಮನಶುದ್ಧಿಗಾಗಿ ಮಾಡಬೇಕು .
              ಹೇಗೆ ವರ್ತಮಾನ ಕಳೆದು ಭವಿಷ್ಯ ಎದುರಾಗುವುದೋ  ಅಷ್ಟೇ ಕ್ಷಣಿಕ ಈ ದುಃಖಗಳು , ನೋವುಗಳು . ನಿನ್ನೆಯ ನೋವಿಗಾಗಿ ಚಿಂತಿಸದೆ , ಇಂದಿನ ಬದುಕನ್ನು ಸಕಾರಾತ್ಮಕವಾಗಿ ಹೇಗೆ 
ರೂಢಿಸಿಕೊಲ್ಲಬಹುದು   ಎಂಬುದನ್ನು ಅರ್ಥೈಸಬೇಕು . ಯಾವ ರೀತಿ ವರ್ಷ ಕಳೆದು ಹೊಸವರ್ಷವು ಬರುವುದೋ ಹಾಗೆ ಜೀವನದಲ್ಲಿ ಸಾಲುಗಳು ಕಳೆದು ಗೆಲುವುಗಳು ಬರುತ್ತದೆ .ಆದರೆ  ಅದರ ನಿಟ್ಟಿನಲ್ಲಿ ಕಾರ್ಯತತ್ಪರಾಗಬೇಕು .
      ಪ್ರತಿವರ್ಷದ ನಮ್ಮ ಬದುಕಿನಲ್ಲಿ ನೋವು , ನಲಿವು , ದುಃಖ, ಪ್ರೀತಿ , ದ್ವೇಷ , ಅಸೂಯೆ , ನಿಂದೆ , ಅವಮಾನ , ಬಿರುದು  ಸನ್ಮಾನಗಳು ಇರುವುದೂ ಹಾಗೆಯೇ ಹೊಸವರ್ಷವೆಂದ  ಮಾತ್ರಕೆ ಇವೆಲ್ಲವೂ ಅದರಲ್ಲಿಯೂ ಇರುತ್ತದೆ , ಆದರೆ ಎಲ್ಲವನ್ನು ಧೈರ್ಯದಿಂದ  ಎದುರಿಸಿ  ತಾಳ್ಮೆಯಿಂದ ನಿರ್ವಹಿಸಿ ಪ್ರೆರನಾತ್ಮಕವಾಗಿ ಮುನ್ನಡೆಸಿ ಬದುಕನ್ನು ಗೆಲ್ಲುವುದೇ ನಿಜವಾದ ಹೊಸವರುಷ ..

Wednesday 22 February 2012

ಬಂಗಾರದ ಮಂಟಪದಿ ಹೊಳೆದಿಹನು ರವಿಯು
ಕಾಂತಿಯ ರಸವನ್ನು ಮನಕೆಲ್ಲ ತಂದಿಹನು
ಮುಂಜಾನೆಯೇ ಬಂದಿಹನು
ನವಚೈತನ್ಯ ತುಂಬಲು
ಹೃದಯಕ್ಕೆ  ಹೊಸತನವ ನೀಡಲು .
ಹೊನ್ನಿನ ಪುಳಕದಿ ಅರಳುತ ಬಂದನು
ಆ ರವಿತೇಜನು..
ಚಂದನ  ಕಳಸದಿ ನಗುತ ಬಂದನು
ಆ ಮಾಧುರ್ಯದ ರಸಿಕನು...
 

Tuesday 21 February 2012

ನಗುವ ಮನಸು



ಮುಸುಕಿನ ತೆರೆಯಿದೆ
ಅವಿತಿರೋ ಮನಸಲಿ
ಮುಗಿಲಾಗಿ ಅರಳಿದೆ
ನೆಲೆನಿಲ್ಲದ ಕನಸಲಿ
ಆತ್ಮವು ಕೆರಳಿದೆ
ಹುದುಗಿರುವ ಬಯಕೆಯಲಿ
ಹೊಸ ಹೂವ ಕಂಡಿದೆ
ನಗುವಂತ ನಯನದಲಿ ...

Friday 17 February 2012

ನಿಗೂಢ ಶಕ್ತಿ

ನನಗೆಲ್ಲ ನೀನೆ
ಕನಸು ನೀನೆ
ಮನಸು ನೀನೆ
ಭಾವನೆಯು ನೀನೆ
ನಾ ಕಾಣದ ನಿಗೂಢ ಶಕ್ತಿಗೆ ಸಾಕ್ಷಿಯಾಗಿ 
 
ಒಲವು ನೀನೆ 
ಬದುಕು ನೀನೆ 
ಉಸಿರು ನೀನೆ 
ಜೀವವು ನೀನೆ 
ನಾ ಕಾಣದ ನಿಗೂಢ ಶಕ್ತಿಗೆ ಸಾಕ್ಷಿಯಾಗಿ 
 
ಕಾಲ ನೀನೆ
ವೀಣೆ ನೀನೆ
ಕಂಠ ನೀನೆ 
ಕೊರಳು ನೀನೆ 
 ನಾ ಕಾಣದ ನಿಗೂಢ ಶಕ್ತಿಗೆ ಸಾಕ್ಷಿಯಾಗಿ 
 
ಮುಗಿಲು ನೀನೆ
ನೆಲವು ನೀನೆ
ಬೇಳೆಯೂ ನೀನೆ
ಆ ರವಿಯೂ ನೀನೆ
 ನಾ ಕಾಣದ ನಿಗೂಢ ಶಕ್ತಿಗೆ ಸಾಕ್ಷಿಯಾಗಿ 
 
 

ಅಣ್ಣ


ಹೃದಯದ ಗೂಡಲಿ ಅರಳಿದೆ
ಒಂದು ಸುಂದರ ಸೌಧ
ನಿನ್ನಯ ನೆನಪಲಿ ಸುಳಿದಿದೆ
ಒಂದು ಅದ್ಭುತ ಕನಸು
ಸಲಹಿದೆ ಅನುದಿನ, ತಿಳಿದಿದೆ
ಮೌನದ ಹಿರಿಮೆ
ಕೂಗಿದೆ ನಿನ್ನನು ಅರಿವಿದೆ
ಸತ್ಯದ ಹಿಂದಿನ ರಹಸ್ಯ
ನಂಬಿದೆ ನಾನು ಮುದುಡಿದೆ ಏಕೆ
ಹೇಳೇ ಬಾಳಿನ ಸಂಬಂಧ
ಯಾರಿಗೂ ಸುಳಿವನು ನೀಡದೇ
ಬೆಳೆಸಿದೆ ನೀನು ನನ್ನಯ ಹೃದಯವ
ಸವಿ ಸವಿ ಮಾತಲು ಸ್ಪರ್ಶವ ನೀಡಿದೆ
ನಿನ್ನಯ ಕನಸನು ನನ್ನದು ಎಂದೇ
ಅರಳುವ ಪುಷ್ಪಕೆ ಸುಗಂಧ ಸವರಿದೆ
ಎಲ್ಲ ನೀನೆ .. ಒಲವಿನ ಅಣ್ಣ

Thursday 16 February 2012

ಮೊದಲ ಕಂಪನ


ಇದು ಇಂದಿನದಲ್ಲ
ನನ್ನೆದೆಯು ಕಂಪಿಸಿದ
ಮೊದಲ ಗಳಿಗೆ
ಮೌನವಾಗಿ ಶರಣಾದ
ಆ ಮೊದಲ ನೋಟ
ಎಲ್ಲವೂ ಈಗ
ಭ್ರಮೆಯಲ್ಲಿ ವಿಹರಿಸಿದಂತಿದೆ
ನೀನೀಗ ಸಿಕ್ಕರೂ
ನನ್ನಲ್ಲೇ ಗೊಂದಲ , ಕಳವಳ
ಮತ್ತೆಲ್ಲೋ ಅದೇ ಕಂಪನ
ಆದರೆ ವ್ಯತ್ಯಾಸ ಇಷ್ಟೇ
ನೀನೀಗ ಬಹುದೂರ
ನಾ ಮಾತ್ರ ಅಲ್ಲೇ , ಅದೇ  ನೆನಪಲ್ಲಿ
ಆಗಿರುವುದು ವರುಷಗಳ
ಉರುಲಾಟ , ಭಾವನೆಯ
ಹುಡುಕಾಟವಲ್ಲ
ಎಲ್ಲೇ ಇರು , ಹೇಗೆ ಇರು
ನೀ ಮಾತ್ರ ನನ್ನ
ಹೃದಯಲ್ಲಿ ಭದ್ರವಾಗಿರು
ಸಿಕ್ಕಾಗ ಆ ನಿನ್ನ ನಗು ಸಾಕು
ನನ್ನುಸಿರು ಉಳಿಯಲು .......

........ಮಾಲಿನಿ ಭಟ್ .........

ಪ್ರೀತಿಯ ಹೂವೇ , ಪ್ರೇಮದ ಫಲವೇ
ಸುಗಂಧವ  ಬೀರುವ ನಂದನ ಜಲವೇ
 
ಮುಸುಕನು ತೆರೆಯಿಸೋ ಹೃದಯದ ಹೂವೇ
ಮಬ್ಬನು ಸರಿಸುವ ಭಾವನೆಯ ರಸವೇ
 
ನನ್ನ ಜೊತೆ ಹೆಜ್ಜೆಯ ಇಡುವ ಜೀವದ ತಾಣವೇ
ಮರೆಯದೆ ರಕ್ಷಿಸೋ ಕರುಣೆಯ ಕುಡಿಯೇ 

Wednesday 15 February 2012

ಶಂತನು



ಭಾರತ ಕಥೆಯ ಸ್ಪರ್ಶವ ಮಾಡಲು,
ತಿಳಿಯಿತು ಒಲವಿನ ಕಥೆಯೊಂದು,
ಶಂತನು ಎನ್ನುವ ಮಹಾರಾಜ ,
ನದಿಯ ತೀರದಲಿ ಒಂದುದಿನ,ಗಂಗೆಯ ನೋಡಲು 
ಒಮ್ಮೆಲೇ ಮೋಹಿತಗೊಂಡನು ,
ಸುಂದರ ರೂಪಕೆ ,
ತಳಮಳಗೊಂಡನು, ವಿಚಲಿತನಾದನು
ದುಗುಡದಿ ಸೋತನು ಅನುದಿನವು
ಅರಳುವ ಹೂವ ಬಾಡಲು ಬಿಡದೆ 
ತಿಳಿಸಿಯೇ ಬಿಟ್ಟನು ಪ್ರೇಮದ ಸಂದೇಶ 
ಉತ್ತರವಿತ್ತಳು ಕನ್ಯೆಯು ಸರಳ ಸ್ವರೂಪದಿ ,
ವಿರಹದ ತಲ್ಲನದಿ, ರಾಜನು ಇಟ್ಟನು ಶಪಥವ,
ಕಂಕಣ ಬಲವು  ಕೂಡಿಯೇ ಬರಲು  
ಬೆಳಗಿತು ಸಂತಸ ಸಂಭ್ರಮವು
ಕಿರಣವು ಅರಳಿತು ಮಗುವಿನ ರೂಪವ ತಾಳಿ ,
ಹುಟ್ಟಿದ ಕಂದನ ನೀರಲಿ ಬಿಟ್ಟಳು
ಒಂದರ - ನಂತರ - ಇನ್ನೊಂದು
ಚಿಂತಿತನಾದನು ರಾಜನು ಅರಿಯದ ವಾಸ್ತವ ಸಂಗತಿಗೆ ,
ಭಾಷೆಯ ಮರೆತು ಕೇಳಿಯೇ ಬಿಟ್ಟನು
ಮಗುವನು ಏತಕೆ ನೀರಲಿ ಬಿಡುವೆ
ಉತ್ತರವಿಡದೆ ಹುಟ್ಟಿದ ಕಂದನ
ಕೈಯಲಿ ಇತ್ತು ಹೊರಟಳು ಗಂಗೆ ತವರಿಗೆ ..............



.........ಮಾಲಿನಿ ಭಟ್.........


ಅರಿಯದೆ ಬರುವ ಸಾವು


ಜೀವನದ ಸುಂದರ ಗುಬ್ಬಚ್ಚಿ ಗೂಡಲಿ
ಪ್ರತಿದಿನ ಹೆಣೆಯೋ ಸಾವಿರ ಕನಸಲಿ
ಪ್ರೀತಿಯ ರಸದ ಲೇಪನದಲಿ
ಸ್ನೇಹದ ಸೂಗಸಾದ ಸ್ಪಂದನದಲಿ
ಬಾಂಧವ್ಯದ ಉಲ್ಲಾಸದಲಿ
ಕ್ಷಣ ಮಾತ್ರದಲಿ
ತನುವು ನಿಷ್ಕ್ರೀಯದಲಿ
ಆತ್ಮದ ಬಲದಲಿ
ಕೈ ಬಿಸಿ ಕರೆಯುವುದು
ಸಾವಿನ ಹಾಸಿಗೆ...

.......ಮಾಲಿನಿ ಭಟ್ ..........
ಮಕ್ಕಳ ಮನಸಿನ ತನ್ಮಯ ರೂಪ
ಮುಗ್ಧತೆ ಎನ್ನುವ ಸರಮಾಲೆ
ಸುಗಂಧಿತ ಸುಂದರ ಹೂಗಳ ರೂಪ
ನಲ್ಮೆಯ ಮಾತಿನ ಪದಮಾಲೆ
ಏನೂ ಅರಿಯದ ದೇವರ ರೂಪ
ನಮ್ಮನು ತಣಿಸುವ ನಗೆಮಾಲೆ
 

Tuesday 14 February 2012

ಇಂದೇಕೆ ಈ ಸುಡು ಮೌನ
ಕಾಡುತಿದೆ ಒಡಲನು
ಅದೇಕೆ ಬೇಸರಿಸಿ ಕುಳಿತಿದೆ
ಮನವೀಗ,
ಕಣ್ಣು ಕಟ್ಟಿದ ದುಗುಡ
ಭಾವ ಸರಿಸಿದ ತಲ್ಲಣ
ತನುವೀಗ ವಿಭ್ರಾಂತ,
ಮುಸುಕಿದ ತೆರೆಗೆ
ಸಲಹು ದೇವ,
ಸರಿಸು ಮುಸುಕ ಕಲೆಯನು,
ಹೊಸ ಬೆಳಕು ಬರಲು
ಸಹಕರಿಸು ..
ನಿನ್ನಡಿಯಲಿ ನಾ ಬೇಡುವೆ

Monday 13 February 2012

ಕಣಿವೆಯ ದಾರಿಯಲಿ
ಕಾನನದ ಮಧ್ಯದಲಿ
ತಂಪನೆಯ ಸ್ಪರ್ಶದಲಿ
ಮೆಲ್ಲನೆ ಹಕ್ಕಿಗಳ ಇಂಚರದಲಿ
ತಪ್ಪಿನ ಕಣ್ಣಿನ ಆಂತರ್ಯದಲಿ
ಆಲಿಸಿದ ಸ್ವರದ ಸಲ್ಲಾಪದಲಿ  
ಕಾಣದ ದಿಗಂತದಲಿ
ಜಲದ ಕಳವಳದಲಿ
ಭರವಸೆಯ ಕಿರಣದಲಿ
ಬೆಳಕಿನ ನಿರಂತತೆಯಲಿ
ಒಡಲಿನ ಬೇಗೆಯಲಿ
ಬಳಲಿಕೆಯ ತುತ್ತತುದಿಯಲಿ
ಕಣ್ಣೀರ ತುಡಿತದಲ್ಲಿ
ಭಾವನೆಗಳ ಬಂಧನದಲಿ
ಮರಳಿನ ಮಡುವಿನಲ್ಲಿ
ಗರ್ಭದ ಸಂದೇಶದಲಿ
ಶೋಧನೆಯ ಕಾರ್ಯದಲಿ
ಅಂತ್ಯವಾಗದ ಹುಡುಕಾಟದಲಿ
ತನುವಿನ ಅಂತ್ಯದಾಟದಲಿ
ಹುಡುಕುತಲೇ ಇರುವೆ ಸಿಗದ  ಕಾರಣ...
 
ಒಂದಿಷ್ಟು ಕನಸು
ನನಸಾಗದ ಮಜಲುಗಳು
ಒಂದಿಷ್ಟು ತುಡಿತ
ಬಿಡಿಸಲಾಗದ ಬಂಧನ  
                                  
ತನುವು ಕೇಳಿದೆ
ಆತ್ಮದ ಕರೆಯ
ಆತ್ಮ ಕೇಳಿದೆ
ದೇಹದ ಕರೆಯ

Friday 10 February 2012

ಹೇಳಬಾರದೆ ??






ಕಂಗಳೆಕೆ ಬಾಡಿದೆ ,
ಉಸಿರು ಏಕೆ ಹಿಡಿದಿದೆ ,
ದ್ವನಿಯು ಏಕೆ ನಿಂತಿದೆ
ಹೇಳಬಾರದೆ ??
                     

ಹೃದಯವೇಕೆ ಮುದುಡಿದೆ
ಮನಸು ಏಕೆ ಕೆರಳಿದೆ
ಮೌನ ಏಕೆ ಮೆರೆದಿದೆ
ಹೇಳಬಾರದೆ ??

ನಿನ್ನ ನೀನು ಮರೆತಿದೆ
ಕನಸು ಏಕೆ ಬಾಡಿದೆ
ಒಲವು ಏಕೆ ಮುನಿದಿದೆ
ಹೇಳಬಾರದೆ ??

ನಿನ್ನೆಯಲ್ಲೂ ಅಳುವಿದೆ
ಇಂದಿನಲ್ಲೂ ಸೋಲಿದೆ
ಮತ್ತೆ ಎಲ್ಲಿ ಸಿಗಲಿದೆ
ನನ್ನ ಕನಸ ಗೋಪುರ
ಹೇಳಬಾರದೆ ??





Thursday 9 February 2012

ಪ್ರಪಂಚವನ್ನು ಸೂಕ್ಷ್ಮವಾಗಿ
ನೋಡಿದರೆ ,
ಯಾರಿಗೂ ಯಾರಿಲ್ಲ
ಆದರೂ ಮರುಗುವೆವು
ನಮಗೆ ಯಾರಿಲ್ಲವೆಂದು ........

ಕ್ಷಣ ಮಾತ್ರಕೆ
ಅವನಿಗೆ
ಅವಳು ಬೇಕು
ಏಕೆಂದರೆ ಅವನೊಬ್ಬ
ಕಾಮುಖ

ಹೂವಿನಂತೆ ಮಧುರ
ನನ್ನವಳ ಮಾತು
ಆದರೆ ನನ್ನ
ಕಂಡಾಗ ಅವಳಾಗುವಳು ಮೌನಿ ..

--

Wednesday 8 February 2012

ನಿನ್ನ ನೆನಪಲಿ

ನಿನ್ನ ನೆನಪಲಿ

ನಿನ್ನ ನೆನಪಲಿ ನಾ ಕಾದು ಕುಳಿತಿಹೆ
ನಿನ್ನೆ ಬರುವೆನು ಎಂದು
ಬರದೆ ಹೋದೆಯಲ್ಲ
ನನ್ನ ಪ್ರೀತಿ ಗೆಳಯ

ತುಸು ಮುನಿಸ ತೋರಲು
ನನ್ನ ಹೃದಯ ಅಳುವುದು ನೋಡು
ಬರದೆ ಹೋದೆಯಲ್ಲ
ನನ್ನ ಪ್ರೀತಿ ಗೆಳಯ

ನೋವನೆಲ್ಲ ನಿನ್ನ ಜೊತೆಯಲಿ
ಅರುಹಿ ಕೊಳ್ಳಲು ಕಾಯುತಿದ್ದೇನು
ಬರದೆ ಹೋದೆಯಲ್ಲ
ನನ್ನ ಪ್ರೀತಿ ಗೆಳಯ

ನನ್ನಲೇನು ತಪ್ಪು ಕಂಡೆ
ಮಾತನಾಡದ ಮನಸು ಬಂತೆ
ಬರದೆ ಹೋದೆಯಲ್ಲ
ನನ್ನ ಪ್ರೀತಿ ಗೆಳಯ

ಸೂರ್ಯ ಹೊರಟನು ಮನೆಗೆ
ಚಂದ್ರ ಬಂದನು ಮರೆಯದಂತೆ
ನೀನು ಮಾತ್ರ ಬರದೆ ಹೋದೆಯಲ್ಲ
ನನ್ನ ಪ್ರೀತಿ ಗೆಳಯ ............. 
                                     
               ...ಮಾಲಿನಿ ಭಟ್ ..

ಪ್ರೀತಿ

ಪ್ರೀತಿ

ಎತ್ತಲೋ ಕಾಣುತ್ತಿದ್ದ ಮಾನಸಳ ಕಣ್ಣುಗಳು ತಡೆಯಿಲ್ಲದೆ ಕಣ್ಣೀರ ಸುರಿಸುತ್ತಿದ್ದವು  . ಯಾವ ತಪ್ಪಿಗಾಗಿ ಈ ನೋವು ತನ್ನನ್ನೇ ತನು ಪ್ರಶ್ನಿಸಿ ಸೋತು ಹೋಗಿದ್ದಳು . ಪ್ರೀತಿಸಿ ಸೋತಿದ್ದಕ್ಕಾ , ಪ್ರೀತಿಗೆ ನೋವಾಗಬಾರದು ಎಂದು ಬಯಸಿದ್ದಕ್ಕಾ,
ಅಬ್ಬಾ! ಒಂದೇ ಒಂದು ಮಾತು ಎಲ್ಲ ಸಂಬಂಧ ಮುರಿದುಬಿಟ್ಟಿತಲ್ಲ  , ಒಡೆದ ಕನ್ನಡಿಯ ಕೂಡಿಸುವುದು ಸಾಧ್ಯವಿಲ್ಲದ ಕೆಲಸ ಹಾಗೆ ಈ ಪ್ರೀತಿಯೂ ...

ಮೌನವಾಗಿ

ಮೌನವಾಗಿರುವುದು ನನಗೇನು ಹೊಸದಲ್ಲ,
ಭಾವನೆಗಳು ಸೋತಾಗ ನಾನಾಗುವುದು  ಮೌನವೇ ..
ಮೌನವಾಗುವುದು ಅಂದರೆ :
ನಾ ಮುನಿಸಿಕೊಂಡೆ ಎಂಬ ಅರ್ಥವಲ್ಲ
ಮೌನವೆಂದರೆ ನಾ ಮೂಕವಾಗಿದ್ದೇನೆ
ಎಂಬ ಸಂದೇಶವಲ್ಲ
ಕಣ್ಣು ಬರಿದಾದ ನೋಟ ಬೀರಿದಾಗ,
ನಾನಾಗುವುದು ಮೌನವೇ ..
ಮೌನವೆಂಬುದು ಎಲ್ಲರಲ್ಲೂ ;
ಆವರಿಸುವ ಶಕ್ತಿ ಅಲ್ಲ , ಅದೊಂದು
ಸುಂದರ ಪದಗಳನು ಮೌನದಲ್ಲೇ
ಸ್ಪಂದಿಸಿ  ಚೈತನ್ಯ ನಿಡೋ
ಅನುರಾಗದ ಸರಮಾಲೆ ......

Tuesday 7 February 2012

ನೀನಿಲ್ಲದೇ


 
    
 ತಂಪನೆ ಗಾಳಿ ಬೀಸಿ
ಮೆಲ್ಲನೆ ಸ್ಪರ್ಶಿಸಿ
ಅಲೆಗಳು ನಗುವ ಸೂಸಿ
ಯಾರು ಎಂದು ಅರಿಯೋ ಮುನ್ನವೇ
ಮರೆಯದೆ ಆವರಿಸಿಬಿಟ್ಟೆ ನಿ ನನ್ನ ಹೃದಯವ..

ಸುಗಂಧಿತ  ಗಂಧ ನೀಡಿ
ಭಾವನೆಗೆ ಜೀವ ನೀಡಿ
ಕನಸಿಗೆ ಸಾಕಾರ ನೀಡಿ
ಯಾರು ಎಂದು ಅರಿಯೋ ಮುನ್ನವೇ
ಮರೆಯದೆ ಆವರಿಸಿಬಿಟ್ಟೆ ನಿ ನನ್ನ ಹೃದಯವ..

ಸಂಬಂಧಕೆ ನೈಜ ರೂಪ ಕೊಟ್ಟೆ
ಕಣ್ಣಿಗೆ ಚೈತನ್ಯದ ಶಕ್ತಿ ಕೊಟ್ಟೆ
ಮನಸಿಗೆ ಭರವಸೆಯ ಕೊಟ್ಟೆ
ಯಾರು ಎಂದು ಅರಿಯೋ ಮುನ್ನವೇ
ಮರೆಯದೆ ಆವರಿಸಿಬಿಟ್ಟೆ ನಿ ನನ್ನ ಹೃದಯವ..

ಮಾತಿಗಾಗಿ ನಾಲಗೆ ,
ಪ್ರೀತಿಗಾಗಿ ಹೃದಯ
ಭಾವನೆಗಳಿಗಾಗಿ ಗೆಳೆಯರು ,
ಮಮತೆಗೆ ತಾಯಿ ,
ಭಾಂದವ್ಯಕ್ಕೆ ಬಂಧುಗಳು ...
ಆದರೂ ಯಾರಿಗೂ ಯಾರೂ ಇಲ್ಲ!!!!
 

ಆ ಒಂದು ಜೀವ

ಇರಬೇಕು ನನಗಾಗಿ ಒಂದು ಜೀವ
ಪ್ರೀತಿಗಾಗಿ ಅಲ್ಲ ...,
ಹೃದಯಕಾಗಿಯೂ ಅಲ್ಲ ..
ಬಾಂಧವ್ಯದ  ಸಿಹಿ ಸ್ಪರ್ಶಕಾಗಿ
ಹುಡುಕಾಡಿದೆ ಒಂದು ಜೀವ
ಮಾತಿಗಾಗಿ ಅಲ್ಲ
 ಒಲವಿಗಾಗಿಯೂ ಅಲ್ಲ ..
ಅಣ್ಣ -ತಂಗಿಯ ಬಂಧಕಾಗಿ ..
ಭಾವನೆಗಳನ್ನು ಹೊಸಕಿ- ಹೊಸಕಿ  ಹೇಳಲು,
ಯಾರಿಗಾಗಿಯೂ ಅಲ್ಲ
ಮನಸಲಿ -ಕಲ್ಮಶವಿರದಂತೆ
ಬಾಂಧವ್ಯಕ್ಕೆ ಲೋಪವಾಗದಂತೆ
ಚಿರವಾಗಿರಬೇಕೆಂಬ ಬಯಕೆ .
ಅಮ್ಮ ಎಂದರೆ ಅದೆಂಥಹ ಸುಂದರ
ಹೇಳಲು ಮನ ಮೈ ನವಿರಾಗುವುದು
ಆ ದೇವರು ನಮಗಾಗಿ ಕೊಟ್ಟ ,
ನಿಜವಾದ ಅಧ್ಭುತ ಪುಷ್ಪ ..
ನಿತ್ಯ ಜೀವನದಲಿ,
ಸುಪ್ತ ಮನಸಲಿ ,
ಕರಗಿದ ಆ ಮೌನ ನಗು
ಸುತ್ತಲೂ ಪಸರಿಸಿದ ಆ ನಿಗೂಢ ಸಂಬಂಧ  
ಜೀವಕ್ಕಿಂತ ಮಿಗಿಲು !
ಮಾತ ಮೊದಲಕ್ಷರವೇ ಆತ್ಮೀಯತೆ
ಗೆಳೆತನದ ಬೆಸುಗೆ ನೋಡಿ
ಧನ್ಯವಾಯಿತು ಜನ್ಮ ಅಂದುಕೊಂಡೆ .
ಪಾವನವಾಯಿತು ಮನಸು
ಆಗಲೇ ಆವರಿಸಿತು
ಆ ಮೋಡದ ಸಾಲುಗಳು
ಬೆಳಕಿಗೆ ಆಸ್ಪದ ನೀಡದೆ,
ಕತ್ತಲನ್ನೇ ತುಂಬಿ ತುಳುಕಿಸಿತು
ಸ್ನೇಹ -ಪ್ರೀತಿ ಎಲ್ಲ ಮುಳುಗಿತು
ಕೆಲ ಕ್ಷಣದ ಕೋಪಕೆ ,
ಸಾಗಿದ ಬದುಕಲಿ ,
ಕೆಲ ಕ್ಷಣಗಳೇ ,ಹೆಚ್ಹು ಬಲಿಷ್ಠ
ಮನಸು -ಭಾವನೆಗೆ ಬೆಲೆ ಎಲ್ಲಿದೆ
ಎಲ್ಲ ನಾವೇ ಗ್ರಹಿಸಿ ಮೋಸ  ಹೋದೆವು !
ಇದೆ ನಿಜ ಜೀವನ ...

ನಾನೇ ಸಾಕಿದ ಕರಿಯ

 
ನಾನೇ ಸಾಕಿದ ಮುದ್ದಾದ ಕನಸು
ಬೆಳೆಯುತ್ತಲೇ ಇತ್ತು ವಾತ್ಸಲ್ಯದಾ ಬಿಂದುವಾಗಿ,
ನಂಬಿಗೆಯ ಜ್ಯೋತಿಯಂತೆ ,
ಅರಿಯಲಾರೆವು ಕಾಯದೊಳಗಣ ರೋಗವ
ದಿನ ದಿನವೂ ಅಧಿಕವಾಯಿತು
ನೋವಿನ ಬಾಧೆಯು,
ಸಹಿಸದಾಯಿತು ಆ ಪುಟ್ಟ ಕಂದನು,
ನರಳಿತು ಪ್ರತಿಕ್ಷಣ ಒಡೆಯನು ಅರಿಯದಂತೆ
ನಗುಮುಖದ ನನ್ನ ಮುದ್ದು ಕಂದನು
ಆ ದಿನವೂ ಮಲಗಿತು
ಒಮ್ಮೆಲೇ ಕಣ್ಣೀರು ಧಾರೆಯಾಗಿ
ಹರಿಯಿತು ಆ ಪುಟ್ಟ ಹೃದಯದಿಂದ
ಒಮ್ಮೆ ಎಲ್ಲವನು ನೋಡಿ ಚಿರ ನಿದ್ರೆಗೆ ಶರಣಾಯಿತು
ಉಸಿರುಗಟ್ಟಿತು ಆ ದಿನ ಮನವೆಲ್ಲ ಭಾರ
 ಕಣ್ಣೀರು  ತುಳು-ತುಳುಕಿ ಬಂತು
ಯಾವಾಗಲೂ ನೆನಪಲ್ಲೇ ಉಳಿಯುವನು
ಅದೇ ನೆನಪು , ಅದೇ ನಗು , ಅದೇ ದುಃಖ
ಅವನ ನೆನಪಲ್ಲಿ ಆಲೋಚನೆಯೇ ಬಾರದು ..
 

ಶಂಕೆ

 
ನಿನ್ನೆತನಕ ಎಲ್ಲ ಇತ್ತು
ಆ ಗಾಢವಾದ  ನಂಬಿಕೆಯಿತ್ತು
ನನ್ನೆಡೆಗೆ ವಾತ್ಶಲ್ಯವಿತ್ತು,
ಇಂದೇಕೆ ಈ ಬಿಗುಮೌನವು
ಉತ್ತರಿಸಲಾಗದ ಪ್ರಶ್ನೆಗಳು
ಒಮ್ಮೆಲೇ ಅದೇಕೆ ಹೀಗಾಗುತಿದೆ
ಮನವು ಏಕೆ ಕಾಡುತಿದೆ
ನನ್ನ ಮನವ ಸ್ವಲ್ಪವಾದರೂ  ಗ್ರಹಿಸು
ಹೃದಯವು ನೋವು ತುಂಬಿ ಧಗಿಸುತಿದೆ
ಪ್ರಶ್ನೆಗಳು , ಉತ್ತರ ಎಲ್ಲ ತುಂಬಿಕೊಂಡಿದೆ
ಹೇಗೆ , ಉಸಿರೆಲೆದುಕೊಳ್ಳಲಿ ,
ಹೃದಯವೇ  ಭಾರವಾಗಿದೆ ..
ದೇಹವೆಲ್ಲ ನಲುಗುವುದು , ಏಕೆ ಹೀಗಾಗುತಿದೆ

ಕಾಲದ ಬದಲಾವಣೆ


Monday 6 February 2012

ಮುಂಜಾನೆ ಶುಭದಿನದಿ
ಕನಸಿನ ಗೋಪುರದಿ
ಹುಡುಕುತಿರುವೆ ಏಕೆ
ಗೆಳಯ ಮಣ್ಣು ಗೂಡಿದ ಕನಸ
ಕಲೆಯು ತುಂಬಿದ ಹಾಳೆಯಲ್ಲಿ
ಹೊಸದು ಏಕೆ ಹುಡುಕುತಿರುವೆ ಗೆಳಯ
ಕವಿದ ಕತ್ತಲು ಸರಿಯುವಂತೆ
ಪ್ರಭೆಯು ತುಂಬಿದ ಕಿರಣ ಸ್ಪರ್ಶವಾಗಲು
ಸಮಯ ನೀಡಲು ಬಲ್ಲೆಯಾ ಗೆಳಯ

ಪುಟ್ಟ ಪುಟ್ಟ ಹೃದಯದ  ಸುಪ್ತವಾದ ಕನಸುಗಳೇ
ಎಂದೂ ಮಾಸದ ನಿರ್ಮಲ ಪುಷ್ಪಗಳೇ 
ಮರೆತು ಮರೆತೆನೆಂದರೂ ನಗುತಿರೋ 
ನಿಮ್ಮ ಭಾವನೆಗಳ ಪುಟ್ಟ ದೀಪವನ್ನ , ಬೆಳಗಿರೋ.. 

--
          ಮಗು
 
ನನಗಾಗಿ ಒಂದು ಪುಟ್ಟ ಹೂವನ್ನು ತಂದೆ
ಅದರಲ್ಲಿ ಸಾವಿರ ಕನಸನ್ನು ಇಟ್ಟೆನು
ಮೃದುವಾಗಿ ಅದರ ಸ್ಪರ್ಶಕ್ಕೆ
ಮನ ಸೋತು ಹೋದೆನು ,
ಯಾರ ಕಂಗಳು ತಾಕದಂತೆ ಜೋಪಾನದಿ  ಇಟ್ಟೆನು ,...
 

ಕಣ್ಣು ಕಾಣದಾದಾಗ , ಎಷ್ಟು ವೈಭವ  ಇದ್ದರೇನು
ಮನಸು ಸೋತಾಗ ,ಯಾರೂ ನಮಗೆ
ಹೃದಯ ಬರಿದಾದಾಗ ಎಲ್ಲಿಯ ಸಂಬಂಧ
ಎಲ್ಲ ಮರೆತು ಬಿಡೋಣ ಎಂದರೆ ಮರೆಯೋದು ಅಸ್ಟು ಸುಲಭವೇ ..
 
ಉಸಿರ ಕಲ್ಪನೆಗೆ ಸಿಗದ ಮಾತೆ,
ಅಂತೂ- ಇಂತೂ ನೀ ಜೊತೆ ನಿಲ್ಲುವೆ
ಯಾರೆಂದು ಅರಿಯದ ಕಲ್ಪನೆ ಜೊತೆ
ಮತ್ತೆ ನಿನಗೆ ನಾ ಸರಿಯೇ
ನಾನಿರುವೆ ಮೌನಿಯಾಗಿ ,
ನೀನಿರುವೆ ಮಾತಿನ ಭಾವನೆಯ ಬೆಳಕಾಗಿ ...
ಯಾವ ಮನಸು ಅದು
ನನ್ನ ಭಾವನೆಯ ಅರಿತದದ್ದು ..
ಯಾವ ಕನಸು ಅದು
ನನ್ನ ಹೃದಯವ ಅರಿತದದ್ದು
ಯಾವ ಗೀತೆ ಅದು
ಮಧುರ ಭಾವ ತಂದದ್ದು
ಯಾವ ಸ್ಪರ್ಶ ಅದು
ನೋವ ಎಳೆಯನ್ನು ಮರೆಸಿದ್ದು
ಹೇಳು ನೀ ಯಾರೆಂದು ..
ಗೂಡು ಇರುವ ಆ ಸ್ಥಳ ,
ಮನಸಲ್ಲೊಂದು ಮಾತು , 
ಪ್ರೀತಿ ಇರುವ ಜಾಗ 
ಕಣ್ಣು ಕಾಣದ ಕಲ್ಪನೆ 
ಮತ್ತೆ ಮತ್ತೆ ನೆನಪು 
ನೆನಪು ಅಳಿಯದ ವಾಸ್ತವ 
ಉಳಿಯಲೇ ಬೇಕು 
ಆ ಒಂದು ಸ್ಥಳ 
ಮತ್ತೆ ಮತ್ತೆ ಕಾಡುವ ಜಾಗ 
ನಮ್ಮ - ನಿಮ್ಮ ಪ್ರೀತಿಯ 
ಮನಸಾ ಮನೆ ..  
ಬಾನು ಕಪ್ಪೆರುತಿದೆ
ಸೂರ್ಯನು ಮನೆಯತ್ತ ಹೊರಟಿದ್ದಾನೆ
ನಾಳಿನ ಕೆಲಸವ ಅನಿಗೊಲಿಸಳು,
ಹೊಸ -ಹೊಸ ಭಾವನೆಗಳ ವಿನಿಮಯದೊಂದಿಗೆ 
ಮತ್ತೆ ನಿಮ್ಮ ಜೊತೆ ಸೇರಲಿದ್ದೇನೆ 
ನಾಳೆಯ ಶುಭ ಮುಂಜಾವಿನೊಂದಿಗೆ ,
ವಿದಾಯ ಗೆಳಯರೇ , ವಿದಾಯ
 
ಬಾಳ ಸಂಜೆಯಲಿ ಜೊತೆಯಾಗಿ ಸಿಕ್ಕ ಗೆಳತಿ
ಕಷ್ಟ -ಸುಖದಲ್ಲಿ ಜೊತೆ ನಿಲ್ಲೋ ಗೆಳತಿ
ಮುನಿಸಿರದೆ ನನ್ನ ಜೊತೆ ನಡೆದ ಗೆಳತಿ
ಹೇಳು ನಿ ಗೆಳತಿ ಯಾರೆಂದು
ನಿನಲ್ಲವೇ ನನ್ನ ಮನಸು ..
 
ಮಾತಾಡು ಗೆಳತಿ ಮಾತಾಡು 
ನಿನಗಾಗಿ ಬಂದಿರುವೆ 
ನಿನ್ನ ಮೆಲುನುಡಿಗಾಗಿ ಬಂದಿರುವೆ 
ಮಾತಾಡು ಗೆಳತಿ ಮಾತಾಡು
 
ಕನಸಿನ ನೆನಪಿಗಾಗಿ ಬಂದೆನು
ನೆನಪಿನ ಆಶಯಕಾಗಿ ಬಂದೆನು
ನನ್ನವರಿರುವರೆಂದು ಬಂದೆನು
ನೀನು ನನ್ನವನೆಂದುಕೊಂಡು ಬಂದೆನು.
 
 

ದೇವರೆಂಬ ಮಾಯೆ

 
 
ದೇವರಾರು ಎಂಬ ಗೊಂದಲ !
ಅಜ್ಞಾತವಾಗಿ ,
ಮನದಲ್ಲಿ ನಂಬಿಕೆಯ
ಬೀಜ ಮೊಳೆಯುತಿರುವಾಗ
ಅಲ್ಲಲ್ಲಿ ಕೆಲಪ್ರಶ್ನೆಗಳು
ಮಿಥ್ಯದ ತಡಿಕೆಯೇರಿ
ನಿಂತಿರುವ ನಿಷ್ಕ್ರೀಯ
ಮನಸುಗಳು !
ದೇವರಿರುವನೇ, ಇರುವನು 
ನಮ್ಮ - ನಿಮ್ಮ ನಡುವೆ 
ಸತ್ಯ ಎಂಬ  ಆತ್ಮದಲ್ಲಿ ,
ಇಂದು ಸತ್ಯವೇ
ಅಗಲುವ   ಸ್ಥಿತಿ ,
ಈಗಲೂ ದೇವರಿರುವನೇ?
ಇರುವನು, ಉಸಿರಿನಲಿ 
ಆ ಹೃದಯದ 
ಬಿಸಿಗಂಧದಲಿ 
ಒಮ್ಮೆಲೇ ,
ಏನು ಹೇಳುವುದೋ 
ತಿಳಿಯದು !
ಆದರೆ ಹೇಳಲೆಂದರೆ  
ದೇವನು ಅಣು - ಅಣುವಲ್ಲಿಯೂ   
ಇರುವನು .. ....
ಮತ್ತದೇ ಬೇಸರ
ಕಾಣದ ದುಗುಡ
ಹೇಳದ ವಿಷಯ
ಅರಿಯದ ಕಳವಳ
ಎಲ್ಲಕ್ಕೂ ಮೀರಿದ ಆ ವಿನೂತ ಭಾವ
ಅದು ಕೈಗೆಟುಕದ ಕುಸುಮ 
ಹೃದಯದ ಮಿಡಿತ ..
ಅಂತರಂಗದ ತುಡಿತ ..

Sunday 5 February 2012

ಸಂಬಂಧ





ಯಾರು ಇಟ್ಟರು ಈ ಹೆಸರು
ರಕ್ತ  - ರಕ್ತದ ಸಂಭಂಧ
ಅದೇಕೆ ಆಗಲಿಲ್ಲ ಭಾವನೆಗಳ ಬಂಧ
ನಿನಗಾಗಿ ನಾನು ನನ್ನತನವನ್ನೇ ತೊರೆದೆನು
ಉಸಿರಲ್ಲಿ ಉಸಿರಾಗಿ
ನಂಬಿಕೆಯಲಿ ವಾತ್ಸಲ್ಯ ತುಂಬಿ
ನಿನ್ನ ಕನಸಿಗೆ ಸಹಕರಿಸಿದೆನು
ನಿನಗೆ ನನ್ನಲ್ಲಿ ಪುಟ್ಟ ಪ್ರೀತಿಯಿರದೆ
ನನ್ನ ವ್ಯಕ್ತಿತ್ವವನ್ನೇ ಏಕೆ ನಾಶ ಮಾಡುವೆ
ನನ್ನ ಜೀವ ನನ್ನ ಭಾವನೆಗಳನ್ನು
ಏಕೆ ಕೊಲ್ಲುವೆ
ನನ್ನ ಅಪರಾಧವಾದರೂ ಏನು
ಹೇಳಿಬಿಡು ಮನದಲ್ಲಿ ಶಂಕೆಯ;
ಗೂಡುಕಟ್ಟಿ ನನ್ನ ನಾಶಮಾಡಬೇಡ ....
ಕಡಲು ಉಕ್ಕುತಿದೆ ನೋಡಲ್ಲಿ
ಬಾನಲ್ಲಿ ನಸುನಗುವ ಚಂದ್ರಮನು ,
ಒಮ್ಮೆ ಚಾಚಿರುವ ಕಾನನವ ನೋಡಲ್ಲಿ
ನಿನಗಾಗಿ ಚಪ್ಪರವ ಹಾಸಿದೆ 
                    ಬೆಳಕನ್ನು ತಾ ಚಂದ್ರಮ
ಮೋಡದ ಸಾಲಲ್ಲಿ ಅವಿತಿರುವೆ ಏಕೆ
ನಿನಗಾಗಿ ಕಾದಿರುವೆವು ನಾವಿಲ್ಲಿ
ನಗುಮುಖದಿ ಬಾ ಇಲ್ಲಿ 
ನಮಗಾಗಿ ಬಾ ಚಂದ್ರಮ
                    ಬೆಳಕನ್ನು ತಾ ಚಂದ್ರಮ
  

ಎಚ್ .ಐ. ವಿ . ವೈರಸ್ ಸಾಧನೆ

 
ಹಳೆದನ್ನ ಮರೆಯುತ್ತ ,
ಹೊಸದನ್ನ ಶೋಧಿಸಲು,
ಬಂದಿತು ಮಾಯಾಲೋಕದ
ದುಂಧುಬಿ  ಅದೇ ಎಚ್.ಐ.ವಿ ಎಂಬ ವೈರಸ್
ಅದರ ಲೋಕದಲಿ ಅದೇ ವಿಜ್ಞಾನಿ
ಹೊರಟಿತು ಗಂಭೀರದಿಂದ  
ಶೋಧನೆಯ ಗೂಡಿನೊಳಗೆ
ಎಲ್ಲದರಲೂ ಮಾಡಿತು ಸಂಶೋಧನೆಯ ಸುರಿಮಳೆ
ಎಲ್ಲವೂ ವಿಫಲ
ಕಣ್ಣಿರಿಡುತ್ತ   ಕುಳಿತಿತು
ತತ್ವಜ್ಞಾನಿಯಂತೆ
ಅಂತೂ ಅದರ ತಲೆಗೆ ಬಂದಿತು ಗಮ್ಮತ್ತಿನ ಐಡಿಯಾ!
ಅದರ ಆಯ್ಕೆ ಮಾನವನ ದೇಹ
ಪ್ರಯೋಗವೂ ಆಯಿತು
ಸಫಲತೆಯಲಿ ಪಡೆಯಿತು ಸಂಭ್ರಮವ
ಇನ್ನೇನು ಪ್ರಶಸ್ತಿಗಳ ಸರಮಾಲೆಯೇ
ಹರಿದು ಬರುವುದು ಎನ್ನುತಿರುವಾಗ
ಅದಕೊಂದು ನಿರಾಸೆಯ ವಾರ್ತೆ ಬಂದಿತು
ಅದಕೆ ಸಿಗಲಿಲ್ಲ ಗೌರವಾಭಿಮಾನ
ಸಿಕ್ಕಿತು ಪ್ರಶವ್ಸೆ - ಪ್ರಶಸ್ತಿಯುದ್ಗೋಷ 
ರೋಗ ಪತ್ತೆ ಹಚ್ಚಿದ ವಿಜ್ಞಾನಿಗೆ .. 

ಬಾಲ್ಯದ ನೆನಪು
 
ಬಾಲ್ಯದ ಕನಸು  ಸುಂದೆರ್ ನೆನಪು
ಮರೆಯದೆ   ಸುಳಿಯೋ ಮುಗ್ದತೆ ಕನಸು
ಯಾರಲೂ  ಕೇಳಲು ಆಗದ ಮಾತು
ಕೂತುಹಲ ಕೆರಳಿಸೋ ಹಿಂದಿನ ನೆನಪು
 
ಬಾಲ್ಯದ ಜೊತೆಯೇ ಸಾಗಿದೆ ಜೀವನ
ನಲಿವಿನ  ,ತಣ್ಣನೆ ಗೀತೆ
ಎಲ್ಲವೂ ನೆನಪಲಿ ಸಿಗದು
ಸ್ಪಷ್ಟತೆ ಸಿಗದು ನೆನಪಿನ ಬುತ್ತಿಗೆ...
 
 
 

ನಿನಗೆ ನಾ ದೂರವೇ

 
 
ಅಣ್ಣ ಎಂದೇ ಪ್ರೀತಿಯಿಂದ
ಕನಸು ಕಟ್ಟಿದೆ ಆಸೆಯಿಂದ
ಮನಸು ಬಿಚ್ಚಿದೆ ಕುಸುಮದಂತೆ
ನಿನಗೆ ನಾ ದೂರವೇ ......
 
ಅಣ್ಣ ಎಂದೇ ಒಲವಿನಿಂದ
ಇಣುಕಿ ನೋಡಿದೆ ಮಾತಿನಿಂದ
ಶಪಥ  ಮಾಡಿದೆ ಹೃದಯದಿಂದ
ನಿನಗೆ ನಾ ದೂರವೇ......
 
ಅಣ್ಣ ಎಂದೇ ಪ್ರಜ್ಞೆಯಿಂದ
ಕಾಂತಿ ಧರಿಸಿತು ಒಡಲಿನಿಂದ
ಸಂಕಲ್ಪ ಮಾಡಿದೆ ಆತ್ಮದಿಂದ
ನಿನಗೆ ನಾ ದೂರವೇ........
 
ಅಣ್ಣ ಎಂದೇ   ಆತ್ಮೀಯತೆಯಿಂದ    
ಚಿದ್ರವಾಯಿತು ಉಸಿರಿನಿಂದ
ದೂರವಾಯಿತು  ಕರುಳಿನಿಂದ    
ನಿನಗೆ ನಾ ದೂರವೇ .........
 
ಬಾನು ಕರೆದಿದೆ ಹಕ್ಕಿಗಳ,
ಚಿಲಿಪಿಲಿ ಸ್ವರದಿ,
ಮಧುರ ಗಾನದಿ,
ಹೊಸದಿನಕೆ  ,
ಇಬ್ಬನಿ  ಸ್ಪರ್ಶಿಸಿದೆ 
ಹೂ ಚಿಗುರೆಲೆಯ ,
ನಾವೆಲ್ಲ ಈ ಸುಂದೆರ್ ಮುಂಜಾನೆಗೆ 
ಪ್ರೀತಿಯಿಂದ ಸ್ವಾಗತಿಸೋಣ  
 
ನಕ್ಕರದೇ ಸ್ವರ್ಗ
ನಗಲು ಬೇಕಲ್ಲವೇ ಸ್ಫೂರ್ತಿ
ನೀನಿರುವೆ ಬಹುದೂರ  ನಲ್ಲೆ
ಹೇಗೆ ನಗಲಿ ನಿನ್ನ ಬಿಟ್ಟು
 
ಬಾನಿಗೆ ಹಾರುವು ಹಕ್ಕಿಯೇ ಕೇಳು 
ಸೂರ್ಯನ ಕಿರಣವು ಬೀಳುವ ಕ್ಷಣವೇ ,
ನಿನ್ನಯ ಕೆಲಸವೂ ಆರಂಭ 
ಒಮ್ಮೆಯೂ ಬೇಸರಿಸೆ ನೀ: ಯಾಕಿದು ಎಂದು 
ನಿನ್ನಲಿ ಎಷ್ಟು ಸಂಯಮ  ತಾಯೆ,
ಕಾಯವ ದಂಡಿಸಿ ದುಡಿವೆ ನೀ
ಹೊಸ ಕನಸಿನ  ತೃಪ್ತಿಗಾಗಿ  .... 
 
 
ಕಣ್ಣ ತುಂಬಾ ಅವಿತು ಕುಳಿತಿದೆ
ರಶ್ಮಿ ಬೆಳಕು ಮಂದವಾಗಿ ಉರಿದಿದೆ
ಯಾರು? ಏನು? , ಎತ್ತ? ಹೇಗೆ? ,
ನೋವು ಮಾತ್ರ ಸ್ಪಷ್ಟವಾಗಿ ಕಂಡಿದೆ
ಹೇಳಲೆಂದು ಬಂದೆನು,
ಆದರೇನು ಮಾಡಲಿ,
ಜಗವು ಕೇಳದು ,
ಸುಪ್ತವಾಗಿ ಹೆದರಿ ಅಲ್ಲೇ ಕುಳಿತಿದೆ ,
ಸುತ್ತ ಬೇಲಿ , ಅರಿವೇ ಇಲ್ಲದಂತ
ಕಠಿಣ ನಿಲುವು ,
ನಯನ ಮಾತ್ರ ನೋವ ನುಂಗಿ ಮಲಗಿದೆ ....
 
ಅಳುವೇ ಏಕೆ ಮನವೇ
ಕಳೆದ ನೋವ ನೆನೆದು
ಅತ್ತು-  ಅತ್ತು ಸೊರಗಿ ನೀನು 
ಬಳಲದಿರು,
 
ಕನಸ ನೆನದು ಮರುಗದಿರು 
ಹೊಸ ಕನಸ ನೀ ಹೆಣೆ
ಎಲ್ಲ   ಬಲ್ಲೆ ಎಂಬ ತತ್ವ 
ಅಸ್ಟು ಸರಿಯೇ 
 
ಹೂವಿಗಾಗಿ ತಪಿಸದಿರು
ದುಂಬಿ ನೆನೆದು ಸುಮ್ಮನಿರು
ನೋವು ಯಾರಿಗಿಲ್ಲ ಹೇಳು
ಸಹಿಸೋ ಕೆಲಸ ಆಗಬೇಕು
 

ಚಿಂತೆ

 
ಕಲ್ಪನೆಯ ಮನಸೇ ,
ಸುಮ್ಮನೆ ಚಿಂತಿಸಿ ಕೊರಗದಿರು
ಒಂದು ಕ್ಷಣ ನಿನ್ನ ನೀ ಸಂತೈಸು
ಉರುಳಿ ಹೋದ ಸಮಸ್ಯೆಯ
ಯೋಚಿಸಿ ಸೊರಗದಿರು
 
ಕಷ್ಟವಿಹುದು ಜೀವನದಿ
ಸುಖವೆಲ್ಲಾ ನಮ್ಮವಲ್ಲ
ನಮ್ಮದು ಆ ಸಹಿಸುವ
ಮನಸ್ಸಾಗಿರಲಿ, ಸುಮ್ಮನೆ
ಯೋಚಿಸಿ ಸೊರಗದಿರಲಿ
 
ಯಾರಿರುವರೆಂದು ನಮ್ಮವರು
ತನ್ನಷ್ಟಕ್ಕೆ ಚಿಂತಿಸಿ ನೋವ ಪಡದಿರು
ಹೇಗಾಗಲಿ ನಮಗೆ ನಾವು
ಕಷ್ಟವು ಕೆಲವು ದಿನ ಸುಮ್ಮನೆ
ಯೋಚಿಸಿ ಸೊರಗದಿರಲಿ...
 
 

ಹುಣ್ಣಿಮೆ ಬೆಳದಿಂಗಳ ರಾತ್ರಿಯಲಿ 
ಕುಳಿತಿರೋ ಆ ಒಂದು ಕ್ಷಣ  
ತಂಪನೆ ಬೆಳಕು ಚೆಲ್ಲಿರಲು
ಸಾವಿರ ಜನರ ನಗುವಿನ
ಮುಖವು ಕಂಡಿರಲು
ನನ್ನಯ ದುಗುಡವು ನೆನಪಾಗಿ
ಅತ್ತಿತು ಹೃದಯವು  ಆ ಒಂದು ಕ್ಷಣ
ಸುತ್ತಲು ತುಂಬಿದ ಮೋಡದ ಸಾಲು
ಎಲ್ಲವ ದಾಟುವ ಬೆಳಕಿನ ವೇಗ
ನನಗೂ ಹುಟ್ಟಿತು ಹೊಸ ಆಸೆ
ನಾನು ಸಾಗಲು ಅಂಜಿಕೆಯಿಲ್ಲದೆ  ಬಹುದೂರ ................
ಒಮ್ಮೆ ಕಂಡ ಕಣ್ಣಿನಲ್ಲಿ ಅದೆಷ್ಟು ಕುತೂಹಲ
ಸೌಂದರ್ಯವ ಹೇಳಲಾಗದ  ಕಣ್ಣು
ಚಿತ್ರವ ಬಿಡಿಸಲಾಗದ ಮನಸು
ಭಾವನೆಯ ಕಲ್ಪಿಸಲಾಗದ ಹೃದಯ
ಮನಸಲ್ಲಿ ಮರೆಯಾಗದ ಬೆಳಕು
ಅದುವೇ ನಿನ್ನ ಕಣ್ಣು
ಮೊದಲ   ನೋಟದ ಸೆಳೆತವು  
 

ಮೊಳಕೆಯೊಡೆದ ಅನುರಾಗ

 
 
ಬಾಲ್ಯದ ಜೊತೆಯಲಿ , ಆಸೆಯ ಹೆಣೆಯುತ ,
ಕರುಬುವೆ ಜೀವನ ನೌಕೆಯಲಿ ,
ಕೈಗಳ ಹಿಡಿದು ಮುದ್ದಿಸಿ ಅಪ್ಪುವೆ;
ಅರಿಯದ ಮಲ್ಲಿಗೆ ಮೊಗ್ಗನು ಜಗ್ಗಿ ,
ಹೃದಯದ ಮುಗ್ದತೆ ಮಂದಿರದಲಿ ,
ಸೆಳೆಯುವೆ   ಪ್ರೀತಿಯ ಸ್ಪಂದಿಸೋ ಸ್ಪರ್ಶವ
ಕಾಲವು ಸರಿಯಿತು , ಬಯಕೆಯು ಮೊಳಗಿತು
ಯೌವನ ಬಂದಿತು ಗಡಿಬಿಡಿಯಲ್ಲಿ
ರಾಗವು ಬೇರೆಯಿತು ,ಬಣ್ಣದ ಚಿಟ್ಟೆಯ  ತಾಳಕೆ  
ಬೆಳಕಿನ  ಕನ್ನಡಿ  ಒಡೆಯಿತು  ,
ಉರಿಯುವ  ಜ್ಯೋತಿಯ  ಸರಿಸುತ
ಬಾಳಿನ  ದ್ವೀಪದ ಗರಿಯನು ಮರೆಯುತ , 
ಕರ್ತವ್ಯವನೆ  ನಂಬಿಸಿ ಬದುಕುವೆ
ಗಂಧದ ಸೃಷ್ಟಿಯ ಜಾನ್ಮೆಯಲಿ ,
ಕಾಯುವ -ಕಾಯುವ ಎನ್ನುವ ನೀನು ,
ಪ್ರೀತಿಯ ಆಸೆಯ ಬಳ್ಳಿಗೆ
ಭೂತ -ಭವಿಷ್ಯದಲಿ ನುದಿಸುವೆ
ಸಂಭಂದಗಳ ಹೊಸ ವೀಣೆಯ ...
 
ಒಂದು ಮನಸಿನ ಸುತ್ತ ಹೆಣೆದ
ಸುಂದರ ಪದವು ;
ಅರಿವಿಲ್ಲದೆ  ಜಾರಿದೆ ,
ಸಾವಿರ ಕನಸ ಚಿತ್ರವು
ಬಣ್ಣವಿಲ್ಲದೆ ರಾಡಿಯಾಗಿದೆ
ತಪ್ಪು ಹುಡುಕುವ ಕಣ್ಣು,
ಮಂಜಾಗಿ ಕಣ್ಣೀರ ಸುರಿಸುತಿದೆ
ಇತ್ತ ಮನಸಾ ದರ್ಪವು
ತಲೆ ಎತ್ತಿ ನಿಂತಿದೆ
ಹೇಳುವುದು ಯಾರಿಗೆ
ಕೇಳದ ಮನಸಿಗೆ , ಅರ್ಥವಾಗುವುದೇ
ಸುಮ್ಮನೆ ನಡೆಯುವುದು ಅಷ್ಟೇ
ನಮ್ಮ ಕೆಲಸ ....

ಅಮೃತಾ


 
ಪ್ರೀತಿಯ ಕಂದ ನೀನು
ವಾತ್ಸಲ್ಯದ ಬಿಂದು ನೀ
ನಾ ಕಂಡ ಮೊದಲ ರಶ್ಮಿ,
ಮುಗ್ಧತೆಯ ಮೂರ್ತಿ ,  
ಆ ಎಳೆ ಸ್ಪರ್ಶ,
ಆಹಾ!! ಅದೆಂತಹ ಮಧುರ
ಇರಲಿ ಸ್ಪರ್ಶ ನಿರಂತರ....
 
 
ಮುದ್ದು ಮುಖದ
ಏನೂ ಅರಿಯದ ಪುಟ್ಟ ಮೊಗ್ಗು ,
ಆ ನಿನ್ನ ನಗು ,
ಅದರಲ್ಲಿಯ ಅರ್ಥ ,
ನಾ ಏನೆಂದು ಊಹಿಸಲಿ,
ಮುಗ್ಧತನಡಿ ಹೇಗೆ ಗೃಹಿಸಲಿ, 
ಆ ನೂತನ ನಗು ನಿರಂತರ ...........
 
ಪುಟ್ಟ - ಪುಟ್ಟ ಹೆಜ್ಜೆ ,
ಜಗವ ಗೆದ್ದ ಸಂಭ್ರಮ,  
ಕಣ್ಣಲ್ಲಿ ಇನ್ನೇನೋ ತವಕ ,
ಮುಂದಿನದನ್ನು ಕಲಿಯುವ ಕಾತರ,
ಮೌನವಾಗೇ ಎಲ್ಲ ಗೆಲ್ಲುವೇ,
ಆ ತಾಳ್ಮೆ ನಿರಂತರ ..............
 
(ನನ್ನ ಪುಟ್ಟ ಮಗಳು ಅಮೃತಾ ಹುಟ್ಟಿದಾಗ , ಅವಳ ಆಟ , ನಗು , ಮಗುವಿನ ಆ ಮುಗ್ಧತೆಯನ್ನು ನೋಡಿ ಬರೆದ ಕವನ )

Thursday 2 February 2012

ಸೆಳೆತ

ಒಮ್ಮೆ ಕಂಡ ಕಣ್ಣಿನಲ್ಲಿ ಅದೆಷ್ಟು ಕುತೂಹಲ
ಸೌಂದರ್ಯವ ಹೇಳಲಾಗದ  ಕಣ್ಣು
ಚಿತ್ರವ ಬಿಡಿಸಲಾಗದ ಮನಸು
ಭಾವನೆಯ ಕಲ್ಪಿಸಲಾಗದ ಹೃದಯ
ಮನಸಲ್ಲಿ ಮರೆಯಾಗದ ಬೆಳಕು
ಅದುವೇ ನಿನ್ನ ಕಣ್ಣು
ಮೊದಲ   ನೋಟದ ಸೆಳೆತವು  ...