Tuesday, 24 April 2012

ಸರಿದಾಡದ ನೋವ ಜಾಲ

 
 
ಬಾಲ್ಯ ಜೊತೆಯಲಿ  ಕಾಲದ ಮಿಲನದಿ
ಸರಿದು ಹೋಗಿದೆ , ಕನಸ ಕಲ್ಪನೆ
 
ಒಡೆದ ಹೃದಯ ಕನ್ನಡಿ , ಹೆಣೆದಿದೆ
ಜಾಲದ ಬಲೆಯನು ಮನಸ ಗೂಡಲಿ
 
ಕಣ್ಣ ರೆಪ್ಪೆ ಮುಚ್ಚಿ ಕಣ್ಣೀರು ಅವಿತಿದೆ
ಜಗದ ಕಟೋರ  ನಿಲುವಿಗೆ
 
ಅವಿತ ಕಣ್ಣೀರು ನೋವ ಕಥೆಯ ಸಾರಿ ಹೇಳಿದೆ
ನವ್ಯ ಬೆಳಕ ತೋರಿಸೋ ಕೈಗಳು ಇಲ್ಲವಾಗಿದೆ ..
 
 
 
           ...........ಮಾಲಿನಿ ಭಟ್..................
 
 

Friday, 20 April 2012

ಒಲವ ನೆನಪಲಿ

 
 
ಹೂವಗಂಧದಿ ನಿನ್ನ ನೋಡಲು
ಕಂಪಿತೆನ್ನೆದೆ ಮೆಲ್ಲನೆ
ಜೀವ ಕರೆದಿದೆ
ಮನಸು ಅರಳಿದೆ
ಬೆಳಗು ಮೂಡಿದೆ ಕಣ್ಣಲಿ
ಹೃದಯ ತನ್ಮಯವಾಗಿದೆ
ನಗೆಯು ಹೊರಟಿದೆ ಸುಳಿಯದೇ
ತಂಪ ಗಾಳಿ ಸೋಕಿದೆ
ನೆನಪು ಮೆಲ್ಲ ಅರಳಿದೆ.
 
....ಮಾಲಿನಿ ಭಟ್ ..........
 

ಹಂಬಲ

 
 
ಜೀವದ ಬೆಸುಗೆಯಲ್ಲಿ
ಉಸಿರಿನ  ಮಿಲನದಲ್ಲಿ
ಸವಿಗನಸಿನ ಮಾಧುರ್ಯದಲ್ಲಿ
ಇಬ್ಬನಿಯ ಮಂಜಿನಲ್ಲಿ
ಸುಪ್ತವಾಗಿ ಕುಳಿತು
ಸಕಲ ನೋಡುತಿರುವ ಆತ್ಮವೇ
ನಿನ್ನ ಒಮ್ಮೆ ಕಣ್ಣಂಚಿನ ತೆರೆಯಷ್ಟಾದರೂ
ನೋಡಿ ಆಂದಿಸುವ ಹಂಬಲ ..
 
 
....ಮಾಲಿನಿ ಭಟ್.............

Thursday, 19 April 2012

ಮನಸ ವೇದನೆ
ಮನಸ ಗಂಧದಿ
ಕಿರಣ ನೀನು
ನೋವ ತಬ್ಬಿ
ಅಳುವೇ ಏಕೆ
ಜೀವ ತುಂಬಿದ
ಉಸಿರ ಹಿಡಿತದಿ
ನನ್ನ ನೀ
ಕೊಲ್ಲುತಿರುವೆ
ಸಾಗು ನೀ
ನನ್ನ ಹೃದಯದಿ
ಉಳಿದು ಹೋಗಲಿ
ಶಾಂತಿ ಮಾತ್ರ
ನೀ ದೂರ ಸರಿಯದೆ
ಜೀವ ಬದುಕದು
ಕೊನೆಗೆ ಉಳಿವುದು
ನನ್ನ ದೇಹದ
ಬೂದಿ ಮಾತ್ರ ..

..........ಮಾಲಿನಿ ಭಟ್ .........

Wednesday, 18 April 2012

ತಂಗಾಳಿ ನಿನ್ನ ಮುದ್ದಿಸೋ .. ಆತುರ
ಕಣ್ಮನ ತಪ್ಪಿಸಿ ಅಡಗಿರಲು
ಭಾವುಕ ಮನವು ಮೆಲ್ಲನೆ ಅರಳಲು
ನಿನ್ನಯ ಸ್ಪರ್ಶವು ನನಗಿರಲು ...
 

ಸ್ನೇಹದಲ್ಲಿ ಒಂದು ಬಿರುಕು

 
 
 
ಮನದ ನಡುವೆ ಸೊಗಸಾ ಚೆಲ್ಲಿ
ಹೃದಯ ತುಂಬಾ ನಗುವ ಹರಡಿ
ಕಂಡ ಕನಸ ಕರದಿ ಹಿಡಿದು
ಸ್ನೇಹದಿಂದ ಜೊತೆಯೂ ನಿಂತ ಹೂವು ನೀನು
 
ಭಾವನೆಯ ಗೂಡವೊಳಗೆ
ಕೂಗಿ ಕರೆವ ನಿನ್ನ ದನಿಗೆ
ಅದೃಷ್ಟವು  ನನದು ಎಂದು
ಬಿಗಿಕೊಂಡೇನು
 
ಸಮಯ ಕಳೆದು   ನಿಶೆಯು ಹರಿದು
ಅಂದು ಬಂತು ನಿನ್ನ ಮನದಿ ಹೊಸದು ರೂಪವೂ
ಅರಿತ ಮನವ ಚಿವುಟಿ ಹೊರಟೆ
ನನ್ನ ಯಾವ ತಪ್ಪಿಗೆ
 
ಸ್ನೇಹಕ್ಕೆ - ಸ್ನೇಹವೆಂದು
ಭರವಸೆಯಲಿ ನಿನ್ನ ಕಲಶವಿಡಲು
ಹುದುಗಿ ನೋವ ನೀಡಿದೆ
ಭಗ್ನವಾಯಿತಿಂದು ಎನ್ನ ಹೃದಯ ದೇಗುಲ
 
 
ಅವಿತ ಮನವು ಬಿಗಿದುಕೊಂಡಿದೆ
ಎದೆಯ ನೋವು ತುಂಬಿ ನಡುಗಿದೆ
ಹೃದಯ ಕೂಗಿ ಕೂಗಿ ಕೇಳಿದೆ
ಯಾವ ತಪ್ಪಿಗೆ ಶಿಕ್ಷೆ ನೀಡಿದೆ
 
ನನ್ನ ಮನವ ಗೃಹಿಸದಾದೆ
ಕಣ್ಣ ನೀರ ಕಾಣದಾದೆ
ಸ್ನೇಹದಲ್ಲಿ ಯಾವ ಲೋಪ ನೋಡಿದೆ
ಜೊತೆಯೇ ಇರುವೆ ಎಂಬ ಮಾತು ಇಷ್ಟು ಕ್ಷಣಿಕವೇ
 
ನೋವು ನನಗೆ ಉಳಿಯಲಿ
ನೀನು ಸದಾ ನಗುತಿರು
ನನ್ನ ಹೃದಯ ಮಿಥ್ಯ ನುಡಿಯದು
ಗ್ರಹಣ ಕಳೆದು ಬೆಳಕು ಹರಿಯಲಿ ...
 
.........ಮಾಲಿನಿ ಭಟ್..............
 
 
 

ಸಂಬಂಧ

 
 
ಸೋಲಲ್ಲಿ ಕೈ ಹಿಡಿದ ಆ ಜೀವ
ಜೀವಕ್ಕೆ ಜೊತೆಯಾದ ಆ ಹೃದಯ
ಹೃದಯಕ್ಕೆ ಸಂಗಾತಿಯಾದ ಆ ಮನಸು
ಮನಸಿಗೆ ಆಧಾರವಾದ ಆ ನನ್ನ ಭಾಗ್ಯ
ಸುತ್ತಲು ಕವಿದಿರುವ ಸುಳಿ
ಸುಳಿಯ ಮೋಹಕ್ಕೆ ತನುವಿನಾರ್ಭಟ
ತನುವಿನ ಭರವಸೆಗೆ ಹೃದಯದ ಬೆಂಬಲ
ಹೃದಯ ಚಿತ್ತಾರಕ್ಕೆ  ಭಾವನೆಗಳ ಬೆಸುಗೆ
ಭಾವನೆಗಳ ತೋಟಕ್ಕೆ ನಗುವಿನ ಲೇಪನ
ನಗುವಿಗೆ ಆಧಾರ ಆ ಸ್ವಚ್ಛ ದಿಗಂತ .
 
........ಮಾಲಿನಿ ಭಟ್ ....
ಹೃದಯ ನೋವಲು , ಮೆಲ್ಲ ಬೆಳಕು ಹರಡಿದ
ಪುಟ್ಟ ಹಣತೆ , ಶ್ರಮಿಸಿದೆ  ನಿಶೆಯ ದೂರ ಸಾರಲು
ನನ್ನ ನೋವ ಮೊದಲು ಅಳಿಸಿ ,
ಜಗಕೆ ಬೆಳಕ ನೀಡುವೆ ......
 
.........ಮಾಲಿನಿ ಭಟ್ .........
 

Tuesday, 17 April 2012

ನನ್ನ ಜೀವನ
 
ಕನಸುಗಳ ಕನ್ನಡಿಯಲ್ಲಿ
ನನಗಾಗಿ ಬರೆದ ನಿನ್ನ ಮುಖಪುಟದಲ್ಲಿ
ನೂಲ ಎಳೆಯಷ್ಟು ಲೋಪವಿಲ್ಲ
ತಿದ್ದಿ ತೀಡಿದ ನಿನ್ನ ಬಣ್ಣದ ಚಾಕ - ಚಕ್ಯತೆಗೆ
ಬೆರಗಾಗಿ ನಿನ್ನಲೇ ನನ್ನ ಜೀವನ ಸವಿಯುವಾಸೆ ...
 
 
...........ಮಾಲಿನಿ ಭಟ್.........................
 
ತಂಗಾಳಿ ನಿನ್ನ ಮುದ್ದಿಸೋ .. ಆತುರ
ಕಣ್ಮನ ತಪ್ಪಿಸಿ ಅಡಗಿರಲು
ಭಾವುಕ ಮನವು ಮೆಲ್ಲನೆ ಅರಳಲು
ನಿನ್ನಯ ಸ್ಪರ್ಶವು ನನಗಿರಲು ...
 
 
.....ಮುಂಜಾನೆಯ ಶುಭಾಶಯಗಳು .............

Monday, 16 April 2012

ಗೆದ್ದಲು ಹುಳ

 
 
ಒಂದು ದಿನ ಮರದ ತೊಗಟೆ
ಕಳಚಿ ಬೀಳಲು
ನೋವಿನಿಂದ ಚೀರಿಕೊಂಡಿತು  
ಮೌನವಾಗಿಯೇ
 
ಅಂದು ಮಣ್ಣಕಣದಿ ಹೆಮ್ಮೆಯಿಂದ
ಬೆಳೆದು ನಿಂತಿತು
ಜಗಕೆ ಸಾರಿ ಹೇಳುತಿತ್ತು
ತನ್ನ ಕಥೆಯನು
 
ಸ್ನೇಹ ಬಯಸಿ ಬಂತು ಒಂದು ಪುಟ್ಟ ಹುಳವು
ಮುದ್ದಿನಿಂದ ಮಮತೆ ನೀಡಿ
ತನ್ನ ಒಡಲ ಕೊಟ್ಟಿತು
ಪ್ರೀತಿಯಿಂದ ಬೆಳೆಯಲೆಂದು ಸಲಹೆ ನೀಡಿತು
 
ಎಲ್ಲ ಕಾಲದಲ್ಲೂ ತೊಗಟೆಯಡಿಯಲಿ
ಮನೆಯ ಮಾಡಿತು
ಪುಟ್ಟ ಪುಟ್ಟ ಮರಿಯು ಬೆಳೆದು
ವಂಶ ಬೆಳೆಯಿತು
 
ಕೊಟ್ಟ ಮಾತ ಮರೆತು
ಮರವು ತನ್ನದೆಂದು ಹೇಳಿತು
ಮುಗ್ಧ ಮನವು ಮೌನವಾಗಿ
ಕಣ್ಣ ನೀರು  ಹರಿಸಿತು
 
ದಿನವೂ ತೊಗಟೆ ಕಳಚಿ
ಬೀಳಲು, ಮಣ್ಣಗೂಡು
ಬೆಳೆದು ನಿಂತಿತು
 
ಪುಟ್ಟ - ಪುಟ್ಟ ಭಾಗವಾಗಿ
ತಿನ್ನತೊಡಗಿತು ,ನೋವಿನಿಂದ
ಮರವು ಬಳಲಿ ಹೋಯಿತು
ತನ್ನ ತನಕೆ ತಾನು ವ್ಯಥೆಯ
ಪಟ್ಟುಕೊಂಡಿತು.......
 
 
ಶುಭಸಂಜೆಯ ಶುಭಾಶಯಗಳು......
 
.........ಮಾಲಿನಿ ಭಟ್...........
ಸೂರ್ಯ ನಲಿದನು ಬಾನ ತೇರಿನಲ್ಲಿ
ಪುಟ್ಟ ಹಕ್ಕಿಯು ತೇಲಿದೆ ಗಗನ ತಲುಪುವ ಬಯಕೆಯಲ್ಲಿ
ಹೃದಯ ಕಟ್ಟಿದೆ ದೂರದಾಸೆಯಲ್ಲಿ
ಮನದ ವಿನಂತಿ ಸಲ್ಲಿಸುವಲ್ಲಿ
ವಿಶ್ವಮಂದಿರ ಸೊರಗಿದೆ   ಬಿಸಿಲ ಆರ್ಭಟದಲ್ಲಿ
ತಂಪ ಸ್ಪರ್ಶವ ನೀಡು ದೇವನೇ ..
ಇದುವೇ ಪುಟ್ಟ ಮನಸಿನ ಪ್ರಾರ್ಥನೆ ...
 

ಜನ್ಮ ಸಾರ್ಥಕ

 
 
ಬಂಗಾರದಿ  ಬರೆದ ಜೀವದ ಅಂಕುರ
ಮೋಹದ ಕವಚದಿ ದೀಪ್ತಿಯ  ಶ್ರವಣ
ಛಾಯೆಯ ಆಶ್ರಯದಿ ಕರ್ಮದ ಫಲವು
ನಿತ್ಯ ಶ್ರವಣದಿ ಚೈತನ್ಯದ ಹೊಳಪು
ಪೂಜ್ಯ ವಂದನೆಗೆ ಬ್ರಾಹ್ಮಣ ಹೆಸರು
ಪ್ರವಚನದಿ ದುಃಖವು ದೂರ
ಚಿತ್ತಶುದ್ಧಿಗೆ ದೇವರ ನಾಮ
ಸಂಪತ್ತಿನ ಹರಿವು ವೀನೀತ ಮನಸು
ಮುಕ್ತಿಯ ಆರಾಧನೆಗೆ ದೃಢತೆ
ತಾಂತ್ರಿಕ ಜಾಲ ಕಾಲದ ಹಿರಿಮೆ
ಜನ್ಮಕೆ ವರದಾನ ಉತ್ತಮ ಮನಸು ...
 
(ಬ್ರಾಹ್ಮಣ ಎಂದರೆ ಸಕಲ ಜೀವಿಗಳಿಗೂ ಒಳ್ಳೆದನ್ನು ಉಂಟುಮಾಡುವವನು ಎಂದರ್ಥ )
 
.......ಮಾಲಿನಿ ಭಟ್ .........

Friday, 13 April 2012

ಮನದೊಳಗೆ ಮುಗಿಬಿದ್ದಿರುವ ನೋವ ಸರಪಳಿಗೆ
ಬಂಧನವ ಕಳಚಲಾಗದೆ , ಸುತ್ತುವರಿದಿರುವ ಬೇಲಿಗೆ
ತುಟಿಯ ಅಂಚಿನಲ್ಲಿ  ಮೂಡಿದ ನಗುವ ಹೊನಲಿಗೆ
ಉತ್ತರ ಸಿಗಲಾರದೆ , ಬಾನ ನೋಡುತಿರುವ ಮರುಳ ಮನಸಿಗೆ
ಬೇಸರಿಸದೆ ನಡೆ ಮುಂದೆ ಎಲ್ಲ ಕಷ್ಟವ ಮೆಟ್ಟಿ ನಿಲ್ಲುತ ..
 
..ಮುಂಜಾನೆಯು ಎಲ್ಲರಿಗೂ ಶುಭವನ್ನೇ ತರಲಿ  .............
 
ಮುದುರಿಕೊಂಡು ಚಾಪೆ ಮೇಲೆ ಮಲಗಿಕೊಂಡಿರುವ 
ಸಾವಿರ ಕನಸುಗಳೊಂದಿಗೆ , ಕಮರಿದ ಬದುಕ ಹಿಡಿದು
ಆಳದ ಮನಸಲ್ಲಿ ಉಳಿದ ದೀಪದ ಪ್ರಜ್ವಲತೆಯಲ್ಲಿ
ಮುನಿದ ಕತ್ತಲೆಗೆ ಶರಣು ಹೋದ ನಿನ್ನ ಏನನ್ನಬೇಕು ...

Wednesday, 11 April 2012

ಮುನಿಯದಿರು ಇಳೆಯೇ, ನಿಮ್ಮ ಕಂದಗಾಗಿ
ನಿನ್ನ ನೀ ಕಂಪಿಸದಿರು , ಸಾಗರದಿ ಅಲೆಯ ಏಳಿಸದಿರು
ನಮ್ಮೆಲರ ತಾಯಿ ನೀ , ನಮ್ಮ ತಪ್ಪ ಮನ್ನಿಸಲಾರೆಯ
ನಿನ್ನ ಒಡಲ ವೇದನೆಯ ಅರಿತು ಮೂರ್ಖರಾಗಿರಲು
ನಮ್ಮ ಮನಸು ನೀನು ತಿಳಿಯಲಾರೆಯ
ನೋಡಲ್ಲಿ ಬಾನ, ಸೂರ್ಯನು ಪ್ರತಿದಿನ ಬೇಸರಿಸದೆ
ಜೀವ ಬೆಳಕ ನೀಡುತಿರುವನು
ಆ ಗಾಳಿ ನೋಡು ಸದಾ ತಂಪ ಸ್ಪರ್ಶ ಮಾಡುತಿರುವುದು
ಈ ದಿನವು ಶುಭವನ್ನೇ ಕೋರು ತಾಯಿ ನಿನ್ನ ಮಕ್ಕಳಿಗಾಗಿ ...
 
......ಶುಭಮುಂಜಾನೆಯ  ಶುಭಾಶಯಗಳು...........................
 
.          .........ಮಾಲಿನಿ ಭಟ್ .................
 

ತಪ್ಪು ಕಲ್ಪನೆ


 
 
ಬದುಕಿನ ಹುಡುಕಾಟದಲ್ಲಿ , ಜಾರಿದ ಕಣ್ಣಿರಲ್ಲಿ
ನೋವಿನ ಸರಪಳಿ ಅಪ್ಪಿ  ಮಿಸುಕಾಡಲು ಬಿಡದೆ
ದಿನ- ದಿನ ಅಧಿಕ , ಸಹಿಸಲಾರದ ಬಾಧೆಯಲ್ಲಿ 
ಸಂಬಂಧಗಳ ಕೊಂಡಿ ಕಳಚದೆ
 
 
ಭಾವನೆಗೆ ಸ್ಪಂದಿಸಲು , ಹೊಸ ಮಾರ್ಗದಲ್ಲಿ
ಕಮರಿದ ಕನಸಿಗೆ , ಜೀವಸೆಲೆ ನೀಡಲಾಗದೆ
ಸ್ವಚ್ಛ ಮನಸಿನ ಕನ್ನಡಿಯು ಅನುಮಾನದಲ್ಲಿ
ಸಾಗರದಾಚೆ ಸೇರಲು ಆಗದೆ 
 
 
ಮನಸಿನ ಬಿಗುಮಾನ , ದರ್ಪದಲ್ಲಿ 
ಸೋಲದ ಹಟದ ಜಾಣತನದಲ್ಲಿ
ಹೃದಯದ ಮೌನ ವೇದನೆಯಲ್ಲಿ
ಚಿವುಟಿದ ಕರಾಳ ಮುಖದಿ
 
 
ಯಾರ ಅನುಮಾನವೋ , ಯಾರ ಅರಿಕೆಯೋ
ತಪ್ಪು ನಡೆದಿದೆ , ವಿಧಿಯ ಇಚ್ಚೆಯಂತೆ
ಮನಸುಗಳು ದೂರ ದೂರ
ಸನಿಹದ ಮಾತು , ಬಡವಾಗಿದೆ
 
 
ನೋವ ಹೇಳಲು ಬಂದ ಜೀವಕೆ
ಕಾರಣವೇ ತಿಳಿಯದೆ , ಸುಸ್ತಾಗಿದೆ
ಸ್ನೇಹದ ಸೌಧ ಕುಸಿದಿದೆ
ಚಿಕ್ಕ ತಪ್ಪು ಗೃಹಿಕೆಯಿಂದ..
 
 
ದೇವರ ಸಂಕಲ್ಪ ಹೇಗಿದೆಯೋ
ವಿಶಾಲ ಜೀವನದಲ್ಲಿ
ಹೆಜ್ಜೆಗುರುತುಗಳು ಅಮೂಲ್ಯ
ಎಲ್ಲ ಜ್ಞಾನದ ಸಂಕೇತ ....
 
....ಮನಸಿನ ಚಿತ್ರಪಟದಲ್ಲಿ ನಾವು ಎಣಿಸಿರುವುದೇ ಒಂದು ,ವಿಧಿಯ ಕೈವಾಡವೇ ಇನ್ನೊಂದು ,..  ಅರಿತೋ ಅರಿಯದೆಯೋ ಜೀವನದಲ್ಲಿ ಅಲ್ಲಲ್ಲಿ  ಅನುಮಾನಗಳು , ತಪ್ಪು ಕಲ್ಪನೆ ಹುಟ್ಟುವುದು ಸಹಜ .. ಇವುಗಳನ್ನು ಮೆಟ್ಟಿ ನಿಲ್ಲುವುದೇ ನಿಜವಾದ ಸ್ನೇಹ .....             ಮಾಲಿನಿ ಭಟ್ .......................
 
 
 
 
 
 
 
 
 
 
 
 

Tuesday, 10 April 2012

ಮದುಮಗಳ ತಾಯಿ ವೇದನೆ

ಇಂದಿನ ದಿನ ಶುಭದಿನ , ಶುಭಕರ
ಮಾಂಗಲ್ಯದಿನ ನಮ್ಮ ಕುವರಿಗೆ
ಹೊಳೆಯುತಿಹಳು ಕೆಂಪಾದ ಮುಖದಲಿ
ನೂರೊಂದು ಆಸೆಯಲಿ
ಕರಗಿಹಳು ಪ್ರೀತಿಸಾಗರದಲಿ
ತಾಯ ತೊಡೆಯಲಿ ಬೆಳೆದ
ಮುತ್ತಿನ ಕಣ್ಣುಗಳಿಗೆ
ತಿಳಿಯದು ಜೀವನದ
ಸುಖ ದುಃಖಗಳು
ಹೊರಟಿಹಳು , ಬಾಳ ನೌಕೆ ಎಳೆಯಲು
ಅರಿಯಲು ಕಷ್ಟ ಸಾಗರವ
ತಿಳಿಯಲು ಬೆರೆಯುವ ಗುಣವ
ಸಾಗಿಹಳು ಸಾಹಸ ಯಾತ್ರೆಗೆ
ಯೌನದ ಬಿಸಿರಕ್ತದಲಿ
ಮೂಡುತಿದೆ ಆತ್ಮವಿಶ್ವಾಶ
ಹೇಗಿರುವಲೋ ಗಂಡನ ಜತೆ
ಸಿಗಲಿ ದೇವರೇ ತಾಯಂತ ಅತ್ತೆಯು
ಸುಖದಲುಳಿಯಲಿ  ನೂರ್ಕಾಲ
ಪತಿಯ ಜೊತೆ
ಬೆಳಗಲಿ ಜ್ಯೋತಿಯಂತೆ ಮನೆಯ
ಪಡೆಯಲಿ ತಾಯಿ ಸುಖವ
ಇರಲಿ ಎಂದೆಂದೂ ಅನ್ಯೋನ್ಯ ಬಾಳ್ವೆಯಲಿ
ಕಣ್ತುಂಬ ನೋಡುವೆವು
ಮಗಳ ಕುಸುಮ ಮುಖವ ...
....ಮಾಲಿನಿ ಭಟ್ .............

Monday, 9 April 2012

ಬೇಲಿಯ ಮೇಲಿನ ಹೂವು

 
 
ಬೇಲಿಯ ಮೇಲಿನ ಹೂವು ಕಾದಿದೆ
ಜಗದ ಪ್ರೀತಿಯ ಬೆಳಕಿಗೆ
 
ಮೋಸ ಸೆಳೆದ ಕಪಟಕೆ
ರಕ್ಷೆ ಇಲ್ಲದೆ ನಲುಗಿದೆ
 
ದಿನವೂ ಕಾದು , ಕಾದು ಸುಪ್ತ ಮನವು ತಲ್ಲಣಿಸಿದೆ
ಶವದಂತಾಗಿದೆ  , ನೋವ ಹೊರಲಾಗದೆ
 
ಬೇಲಿ ಹೂವು , ಕಂಪು ಸಿಗದೇನು?
ರಸದ ಜೇನು ನನ್ನಲ್ಲಿಲ್ಲವೇನು ?
 
ನನ್ನಲ್ಲೇನು ತಪ್ಪು ಹುಡುಕಿದೆ , ಯಾವ ಜೀವಿಗೂ ಬೇಡವಾದೆ
ಸೃಷ್ಟಿದಾತ  ಸಿಗಲಿ ನನಗೆ ಕೇಳುವೆ ಇದರ ಮರ್ಮವ
 
ನನ್ನ ಸೌಂದರ್ಯ ಕಡಿಮೆಯೇನು ?
ದೇವ ಅಡಿಗೂ ದೂರವಾದೆ , ನನ್ನಲೇನು ಪಾಪವಿದೆ ...
 
................ಮಾಲಿನಿ ಭಟ್ ...
 
 
 
 
 
 
 
 
 
ಮುಖದ ಮೇಲೆ ತುಂಬಿ ನಲಿದ ಹನಿ- ಹನಿ ನೀರ ಗುಚ್ಚದಲ್ಲಿ
ಉಳಿದು ಹೋದ ಸಾವಿರ ಮನಸಾ ವೇದನೆಯಲ್ಲಿ 
ಬಾನು ನೋಡಲು ಉತ್ತುಂಗದಲ್ಲಿ ಸರಿದಾಡಿದ ಮೋಡ 
ದಿನಕರನು ಮುನಿದು ತನ್ನ ಗೃಹವ ಸೇರುತಿರಲು 
ಹೊಸ   ತಂಗಾಳಿ ಬಿಸಿ ಬರಲಿ  .. ಸಕಲ ವಿಶ್ವದ ಒಳಿತಿಗೆ ..
 
 
..........ಶುಭಸಂಜೆಯ  ವಿದಾಯ .. ಗೆಳಯ / ಗೆಳತಿಯರೆ ..........

ಅಮ್ಮ ನಿನ್ನ ಮಡಿಲು

ಅಮ್ಮ ನಿನ್ನ ಮಡಿಲು ನನಗೆ ಪ್ರೀತಿಯ ಹೂಗೊಂಚಲು
ನಿನಗೆ ಋಣಿಯು ನಾ , ಬಾಳ ಕೊನೆಯ ಅಂಚಲು
ಜೀವ ತೇದು , ನಿನ್ನ ಮರೆತು ನನಗೆ ಜನ್ಮ ಕೊಡಲು
ಉಸಿರಿನಲ್ಲಿ ಉಸಿರ ಹುದುಗಿಸಿ , ಮಮತೆ ನೀಡಲು
ಜಗದ ಕಷ್ಟ ಅರಿಯದಂತೆ , ನಿನ್ನ ಹೃದಯದಲ್ಲಿ ಜಾಗ ನೀಡಿದೆ
ಅಮ್ಮ ಎಂಬ ತೊದಲು ನುಡಿಯು ಮನಕೆ ಹರ್ಷ ಕೊಟ್ಟಿದೆ ..
.............ಮಾಲಿನಿ ಭಟ್...

Sunday, 8 April 2012

ಒಂದು ಗುಲಾಬಿಯ ಗಿಡ ನೆಡಲು ನಾನಂದು
ಮನಸಾರೆ ಹೂವ ನೀಡಿ ಕರೆಯುತಿದೆ  ಇಂದು
ಇರುವ ಒಂದು ದಿನವ , ನಮಗಾಗಿ ನೀಡುತಿದೆ
ಎಂತಹ ನಿಸ್ವಾರ್ಥ ಗುಣ .....
ಮನುಜನಿಗೆ ಒಂದು ಪಾಠವಾಗಬಲ್ಲದೆ ...

ಕಾಡಿದನು ಗೆಳಯ


ಕನಸುಗಳ ಕಟ್ಟೆಯಲ್ಲಿ  ಮಡುಚಿದ ಮೌನ ಗೆರೆಯಲ್ಲಿ
ನಿನ್ನೊಂದು ಮೆಲುನುಡಿಗಾಗಿ ತವಕದಲ್ಲಿ
ನದಿಯಲೆ ತೆವಳುವ ಸಪ್ಪಲದಲ್ಲಿ
ಮರಳ ಕಣಗಳು ಹನಿಗೂಡೋ ಚಿತ್ರಣದಲ್ಲಿ
ನಡೆವ ಹಾದಿಯಲಿ , ಹೂವ  ಕನಸಲ್ಲಿ  
ಬದುಕು ಸಾಗಿದ ಮಧುರ ಪಟದಲ್ಲಿ
ಸುಪ್ತವಾಗಿ ಹುದುಗಿದ ಒಲವ ಮಂಟಪದಲ್ಲಿ
ಹೊಳೆವ ನಯನದಲ್ಲಿ ನೆನಪಾದ ಮುಗ್ಧತೆಯಲ್ಲಿ

ಕಾಡಿದನು ಗೆಳಯ ಹೃದಯ ಪರ್ವತದಲ್ಲಿ 
ಕಾಡಿದನು ಗೆಳಯ ಉಸಿರ ಗಂಧದಲ್ಲಿ ..
.........ಮಾಲಿನಿ ಭಟ್...

Tuesday, 3 April 2012

ಪ್ರಕೃತಿಯ ಕೋಪವು

ಮರಳ ತಡಿಯಲಿ ಕನಸ ಹೆಣೆಯಲು ಅಲೆಗೂ ನನ್ನಲಿ ಕೋಪವು
ರಭಸವಾಗಿ ಬಿಸಿತೊಮ್ಮೆ , ಕಣ್ಣ ಕುಕ್ಕಿಸೋ ಕಿರಣವು
ಮಬ್ಬು ಕವಿದು ಕಣ್ಣು   ಕ್ಷೀಣ ನೋಟವ ಬೀರಲು
ಅಸ್ಪಷ್ಟ   ಚಿತ್ರದಿ ಬದುಕು ನೀರಲಿ ಮುಳುಗಲು
ಹುಡುಕಿದೆ ಬಿಡದ ಪ್ರಯತ್ನ ನೀರ ತಡಿಯಲಿ
ಮತ್ಸ್ಯಗಳು ಜೊತೆ ವಿಭಿನ್ನ ಪರಿಶ್ರಮದಲಿ
ಆಳವಿಳಿದಂತೆ ಹೃದಯ ಬಡಿತ ನಾಗಾಲೋಟದಲಿ
ಬದುಕು ಅರಸಿ , ವಿಚಿತ್ರ ಕೂಪದಲಿ
ಸಿಗುವುದೇ ನನ್ನ ಕನಸಿನ  ಚಿತ್ರಪಟ
ಬರಿಗೈ ಯಲ್ಲಿ ಬಂದು ಬಿಟ್ಟಿದ್ದೇನೆ
ಸಾವಿರ ಕನಸಿನ  ಬದುಕಿನ ತೋಟ
ದೇವರೇ ನಿನ್ನನ್ನು ನಂಬಿದ್ದೇನೆ ...
...........ಮಾಲಿನಿ ಭಟ್ ..........

ಸೃಷ್ಟಿಯ ಕೊಡುಗೆ

ಭಾವ ಹಲವು  ಜೀವ ಒಂದೇ
ದನಿಯು ಹಲವು ಜೊತೆಗೆ ಮಾತ್ರ ಯಾರು ಇಲ್ಲ
ಕರುಳ ಬಳ್ಳಿಯ ಕಡಿದು ಬಂದೇವು
ಮತ್ತೆ ಮತ್ತೆ ಸ್ವಾರ್ಥ ದ ಜೊತೆ
ಭುವಿ , ನೀರು, ಗಾಳಿಯ ಜೊತೆ ;
ಪ್ರತಿದಿನ ಆಡಿದೆವು ಆಟವ,
ಒಂದೇ ಗುರಿ ಮನುಜಗೆ
ಮುಗಿಯದ ಆಸೆಗೆ .. ಮತ್ತಿಸ್ಟು ಬೆಸುಗೆ ಲೇಪನ ...
 
ಮನುಜನ ಆಸೆಗೆ ಎಂದು ಮುಕ್ತಾಯ
ಉಳಿಯುವುದೇ ಸೃಷ್ಟಿಯ ಕೊಡುಗೆ ..
 
 
 

Monday, 2 April 2012

ಹೊಸ ಸಂಬಂಧ

ಜೀವ ತುಡಿದು ಸೆಳೆಯಿತು ಹೊಸದು ಬಂಧಕೆ
ಹೃದಯ ಬಯಸಿ  ಬೆಳೆಯಿತು,ಭಾವ ವೀಣೆ ಮಿಡಿತಕೆ
ದೀಪ ಬೆಳಕು ಪ್ರಜ್ವಲಿಸಿತು , ಉರಿದು ಹೋಗೋ ಕೊನೆಯ ಹಂತಕೆ
ಮೂರ್ಖ ತನದಿ ಕನಸ ನೆಟ್ಟಿತು , ನವ್ಯತೆಯ ಭಾವಕೆ
ಬೇಡವೆಂದರೂ ಬೆಳೆಯ ಹತ್ತಿತು ಮನದ ಮಲ್ಲಿಗೆ ಗೂಡಲಿ
ಸೆಳೆಯಿತು ಭವಿಷ್ಯದ ಕನಸ ನಿರ್ಮಾಣದಲಿ
ಮೌನದಲ್ಲೇ ಅರಳಿತು , ಕಂಡ ಕನಸ  ಬೆಳಕಲಿ
ಹೊತ್ತಿತು ಹೊಸ ಕ್ರಾಂತಿ ಮನಸಿನ ತೊಯ್ದಾಟದಲಿ
ಭರವಸೆಯು ಚಿಲುಮೆಯಾಗಿ ಸೇರಿತು , ಮುಗ್ಧ ಮನದಲ್ಲಿ
ನೇಯ್ದ ಗೂಡು , ಬಣ್ಣದ ಲೇಪನದಲ್ಲಿ
ಮುಗಿಲ ಮಲ್ಲಿಗೆ ಸುಂದರ ಮಾಲೆಯಲ್ಲಿ
ಸುಂದರ ಸಂಬಂಧಕೆ ಅಲೆಯಾಗಿ ಹಾಡ ಗುನುಗುತಿತ್ತು ...
...........ಮಾಲಿನಿ ಭಟ್...............

ಜೀವಜಲಬಿಸಿಲು ಕಾದು ನೆಲವು ಬರಿದಾಗಿದೆ
ಹಸಿರು ಮೊಳಕೆ ಅಲ್ಲೇ ಕರಗಿದೆ
ಜೀವಸೃಷ್ಟಿ ನೊಂದು ಕೊರಗಿದೆ
                 ಪುಟ್ಟ ಮನವು ಕರೆದಿದೆ

ಬರಡು ನೆಲದಿ , ಜೀವ ಸೆಲೆಯು ಉಕ್ಕಲಿ
ಬತ್ತಿ ಹೋದ ಮನಸಿನಲ್ಲಿ ಹೂವ ನಗುವು ಚೆಲ್ಲಲಿ
ಅಮೃತಧಾರೆ ನೀಡಲಿ ...
                          ಪುಟ್ಟ ಜೀವ ಬಯಸಿದೆ

ಜಲವು ನಮಗೆ ಅನ್ನದಾತ
ಜಲವು ನಮಗೆ ಜೀವಕಲ್ಪ
ಜಲವೇ ನಮ್ಮ ಭಾಗ್ಯದಾತ
                     
                           ಜೀವ ಜಲವ ಆವರಿಸಿದೆ

ಕಾಡು ಕಡಿದು , ನಾಶವಾಯ್ತು ವನದ ತಪ್ಪಲು
ಜೀವ ಕೋಟಿ ಮನದಿ ಶಾಪ ಇಟ್ಟರು
ಮೇಘರಾಜ ಹೆದರಿ ನಭದಿ ಹೊಕ್ಕಲು
                         
                             ಜಲಕೆ ವಿನಂತಿ  ತಲುಪಿದೆ

ವನವ ಬೆಳೆಸಿ , ಜೀವಶಕ್ತಿ ಉಳಿಸಿ
ನಾಶಮಾಡಿ ಕೊರಗದಿರು , ..


 ...........ಮಾಲಿನಿ ಭಟ್....