Wednesday 11 April 2012

ತಪ್ಪು ಕಲ್ಪನೆ


 
 
ಬದುಕಿನ ಹುಡುಕಾಟದಲ್ಲಿ , ಜಾರಿದ ಕಣ್ಣಿರಲ್ಲಿ
ನೋವಿನ ಸರಪಳಿ ಅಪ್ಪಿ  ಮಿಸುಕಾಡಲು ಬಿಡದೆ
ದಿನ- ದಿನ ಅಧಿಕ , ಸಹಿಸಲಾರದ ಬಾಧೆಯಲ್ಲಿ 
ಸಂಬಂಧಗಳ ಕೊಂಡಿ ಕಳಚದೆ
 
 
ಭಾವನೆಗೆ ಸ್ಪಂದಿಸಲು , ಹೊಸ ಮಾರ್ಗದಲ್ಲಿ
ಕಮರಿದ ಕನಸಿಗೆ , ಜೀವಸೆಲೆ ನೀಡಲಾಗದೆ
ಸ್ವಚ್ಛ ಮನಸಿನ ಕನ್ನಡಿಯು ಅನುಮಾನದಲ್ಲಿ
ಸಾಗರದಾಚೆ ಸೇರಲು ಆಗದೆ 
 
 
ಮನಸಿನ ಬಿಗುಮಾನ , ದರ್ಪದಲ್ಲಿ 
ಸೋಲದ ಹಟದ ಜಾಣತನದಲ್ಲಿ
ಹೃದಯದ ಮೌನ ವೇದನೆಯಲ್ಲಿ
ಚಿವುಟಿದ ಕರಾಳ ಮುಖದಿ
 
 
ಯಾರ ಅನುಮಾನವೋ , ಯಾರ ಅರಿಕೆಯೋ
ತಪ್ಪು ನಡೆದಿದೆ , ವಿಧಿಯ ಇಚ್ಚೆಯಂತೆ
ಮನಸುಗಳು ದೂರ ದೂರ
ಸನಿಹದ ಮಾತು , ಬಡವಾಗಿದೆ
 
 
ನೋವ ಹೇಳಲು ಬಂದ ಜೀವಕೆ
ಕಾರಣವೇ ತಿಳಿಯದೆ , ಸುಸ್ತಾಗಿದೆ
ಸ್ನೇಹದ ಸೌಧ ಕುಸಿದಿದೆ
ಚಿಕ್ಕ ತಪ್ಪು ಗೃಹಿಕೆಯಿಂದ..
 
 
ದೇವರ ಸಂಕಲ್ಪ ಹೇಗಿದೆಯೋ
ವಿಶಾಲ ಜೀವನದಲ್ಲಿ
ಹೆಜ್ಜೆಗುರುತುಗಳು ಅಮೂಲ್ಯ
ಎಲ್ಲ ಜ್ಞಾನದ ಸಂಕೇತ ....
 
....ಮನಸಿನ ಚಿತ್ರಪಟದಲ್ಲಿ ನಾವು ಎಣಿಸಿರುವುದೇ ಒಂದು ,ವಿಧಿಯ ಕೈವಾಡವೇ ಇನ್ನೊಂದು ,..  ಅರಿತೋ ಅರಿಯದೆಯೋ ಜೀವನದಲ್ಲಿ ಅಲ್ಲಲ್ಲಿ  ಅನುಮಾನಗಳು , ತಪ್ಪು ಕಲ್ಪನೆ ಹುಟ್ಟುವುದು ಸಹಜ .. ಇವುಗಳನ್ನು ಮೆಟ್ಟಿ ನಿಲ್ಲುವುದೇ ನಿಜವಾದ ಸ್ನೇಹ .....             ಮಾಲಿನಿ ಭಟ್ .......................
 
 
 
 
 
 
 
 
 
 
 
 

1 comment:

  1. ** ಈ ಕವನದ ರೂಪದಲ್ಲಿ ಕಾವ್ಯದ ರಚನೆ ಇಂದು ನಿನ್ನೆಯದಲ್ಲ, ಸಾಹಿತ್ಯದ ಲ್ಲಿ ಮೊದಲು ಗದ್ಯ-ಪದ್ಯ-ಚಂಪು ಎಂಬ ಪ್ರಕಾರಗಳಿದ್ದವು. ಕನ್ನಡ ಸಾಹಿತ್ಯವೂ ಇದಕ್ಕೆ ಹೊರತಾಗಿರಲಿಲ್ಲ, ನಂತರದಲ್ಲಿ, ಭಕ್ತಿ ರಚನೆಗಳು ಬಂದ ಕಾಲಕ್ಕೆ ಪ್ರಕಾರ ಗಳು ಹೆಚ್ಚುತ್ತಾ ಹೋಗಿ ಇಂದು ಅನೇಕ ವೈವಿದ್ಯಗಳ ತಾಣವಾಗಿದೆ.
    ನಿಮ್ಮ ಸಾಹಿತ್ಯ ಕೃಷಿಗೆ ಆಯ್ದುಕೊಂಡ ಕ್ಷೇತ್ರ ಈ ಕವನಗಳು, ಕವನ, ವಾಸ್ತವದ ವಸ್ತುವನ್ನು ಕಲ್ಪನೆಯ ವಿಸ್ತಾರಕ್ಕೆ ತಕ್ಕಂತೆಹಿಗ್ಗಿಸಿ ಬಗ್ಗಿಸಿ ಕೆತ್ತಬಹುದಾದ ಶಿಲ್ಪ.ಇಲ್ಲಿ ಬರೆಯುವವನ ಮನೋಧರ್ಮ ಒಂದಾದರೆ ಅರ್ಥೈಸಿಕೊಂಬವನ ಮನೋಧರ್ಮ ಬೇ ರೆಯಾಗಿರಬಹುದು, ಆದರೆ ಒಂದು ಮಾತು ಹೇಳಲೇ ಬೇಕುನಾನು, ಕಾವ್ಯದ ಆ ತ್ಯಂತಿಕ ಆಮೋದ ಶಾಂತರಸದ ಆವಿರ್ಭಾವದಲ್ಲಿ ಆಗಬೇಕು.ಮತ್ತೆ ಈ ನಿಸರ್ಗ ವನ್ನು ಎಷ್ಟು ವರ್ಣಿಸಿದರೂ ಸಾಲದಲ್ಲವೇ? ನಾನು ಗಮನಿಸಿದಂತೆ ನಾವು ದಿನವೂ ಒಂದು ಮಾರ್ಗದಲ್ಲಿ ಓಡಾಡುತ್ತಿದ್ದರೂ ಅಲ್ಲಿನ ಪ್ರಕೃತಿಯನ್ನು ದಿನವೂ ನೋಡುತ್ತಿದ್ದರೂ ಮತ್ತೆ ಮತ್ತೆ ಬಸ್ಸಿನ ಕಿಟಕಿ ಗಾಜುಗಳನ್ನು ಸರಿಸಿ ನೋಡುತ್ತೇವೆ, ಇದಕ್ಕೆ ಕಾರಣ "ನವ ನವೋನ್ಮಾಷಶಾಲಿನೀ ಪೃಥಿವೀ" . ಹಾಗಾಗಿ ಪ್ರತಿಯೊಂದು ನಿಮ್ಮ ಕವನದಲ್ಲಿಯೂ ನಾನು ನೋಡಿದ ಅನುಭವಿಸಿದ ಅನೇಕ ಕ್ಷಣಗಳು ಇರುವುದರಿಂದ ಆಪ್ಯಾಯವೆನಿಸುತ್ತವೆ.
    ನಿಮ್ಮ ಬರವಣಿಗೆಯ ಕ್ಷೇತ್ರ ವಿಸ್ತಾರಗೊಳ್ಳಲೀ. ಒಳ್ಳೆಯದಾಗಲೀ.

    ReplyDelete