Monday, 9 April 2012

ಅಮ್ಮ ನಿನ್ನ ಮಡಿಲು

ಅಮ್ಮ ನಿನ್ನ ಮಡಿಲು ನನಗೆ ಪ್ರೀತಿಯ ಹೂಗೊಂಚಲು
ನಿನಗೆ ಋಣಿಯು ನಾ , ಬಾಳ ಕೊನೆಯ ಅಂಚಲು
ಜೀವ ತೇದು , ನಿನ್ನ ಮರೆತು ನನಗೆ ಜನ್ಮ ಕೊಡಲು
ಉಸಿರಿನಲ್ಲಿ ಉಸಿರ ಹುದುಗಿಸಿ , ಮಮತೆ ನೀಡಲು
ಜಗದ ಕಷ್ಟ ಅರಿಯದಂತೆ , ನಿನ್ನ ಹೃದಯದಲ್ಲಿ ಜಾಗ ನೀಡಿದೆ
ಅಮ್ಮ ಎಂಬ ತೊದಲು ನುಡಿಯು ಮನಕೆ ಹರ್ಷ ಕೊಟ್ಟಿದೆ ..
.............ಮಾಲಿನಿ ಭಟ್...

Sunday, 8 April 2012

ಒಂದು ಗುಲಾಬಿಯ ಗಿಡ ನೆಡಲು ನಾನಂದು
ಮನಸಾರೆ ಹೂವ ನೀಡಿ ಕರೆಯುತಿದೆ  ಇಂದು
ಇರುವ ಒಂದು ದಿನವ , ನಮಗಾಗಿ ನೀಡುತಿದೆ
ಎಂತಹ ನಿಸ್ವಾರ್ಥ ಗುಣ .....
ಮನುಜನಿಗೆ ಒಂದು ಪಾಠವಾಗಬಲ್ಲದೆ ...

ಕಾಡಿದನು ಗೆಳಯ


ಕನಸುಗಳ ಕಟ್ಟೆಯಲ್ಲಿ  ಮಡುಚಿದ ಮೌನ ಗೆರೆಯಲ್ಲಿ
ನಿನ್ನೊಂದು ಮೆಲುನುಡಿಗಾಗಿ ತವಕದಲ್ಲಿ
ನದಿಯಲೆ ತೆವಳುವ ಸಪ್ಪಲದಲ್ಲಿ
ಮರಳ ಕಣಗಳು ಹನಿಗೂಡೋ ಚಿತ್ರಣದಲ್ಲಿ
ನಡೆವ ಹಾದಿಯಲಿ , ಹೂವ  ಕನಸಲ್ಲಿ  
ಬದುಕು ಸಾಗಿದ ಮಧುರ ಪಟದಲ್ಲಿ
ಸುಪ್ತವಾಗಿ ಹುದುಗಿದ ಒಲವ ಮಂಟಪದಲ್ಲಿ
ಹೊಳೆವ ನಯನದಲ್ಲಿ ನೆನಪಾದ ಮುಗ್ಧತೆಯಲ್ಲಿ

ಕಾಡಿದನು ಗೆಳಯ ಹೃದಯ ಪರ್ವತದಲ್ಲಿ 
ಕಾಡಿದನು ಗೆಳಯ ಉಸಿರ ಗಂಧದಲ್ಲಿ ..
.........ಮಾಲಿನಿ ಭಟ್...

Tuesday, 3 April 2012

ಪ್ರಕೃತಿಯ ಕೋಪವು

ಮರಳ ತಡಿಯಲಿ ಕನಸ ಹೆಣೆಯಲು ಅಲೆಗೂ ನನ್ನಲಿ ಕೋಪವು
ರಭಸವಾಗಿ ಬಿಸಿತೊಮ್ಮೆ , ಕಣ್ಣ ಕುಕ್ಕಿಸೋ ಕಿರಣವು
ಮಬ್ಬು ಕವಿದು ಕಣ್ಣು   ಕ್ಷೀಣ ನೋಟವ ಬೀರಲು
ಅಸ್ಪಷ್ಟ   ಚಿತ್ರದಿ ಬದುಕು ನೀರಲಿ ಮುಳುಗಲು
ಹುಡುಕಿದೆ ಬಿಡದ ಪ್ರಯತ್ನ ನೀರ ತಡಿಯಲಿ
ಮತ್ಸ್ಯಗಳು ಜೊತೆ ವಿಭಿನ್ನ ಪರಿಶ್ರಮದಲಿ
ಆಳವಿಳಿದಂತೆ ಹೃದಯ ಬಡಿತ ನಾಗಾಲೋಟದಲಿ
ಬದುಕು ಅರಸಿ , ವಿಚಿತ್ರ ಕೂಪದಲಿ
ಸಿಗುವುದೇ ನನ್ನ ಕನಸಿನ  ಚಿತ್ರಪಟ
ಬರಿಗೈ ಯಲ್ಲಿ ಬಂದು ಬಿಟ್ಟಿದ್ದೇನೆ
ಸಾವಿರ ಕನಸಿನ  ಬದುಕಿನ ತೋಟ
ದೇವರೇ ನಿನ್ನನ್ನು ನಂಬಿದ್ದೇನೆ ...
...........ಮಾಲಿನಿ ಭಟ್ ..........

ಸೃಷ್ಟಿಯ ಕೊಡುಗೆ

ಭಾವ ಹಲವು  ಜೀವ ಒಂದೇ
ದನಿಯು ಹಲವು ಜೊತೆಗೆ ಮಾತ್ರ ಯಾರು ಇಲ್ಲ
ಕರುಳ ಬಳ್ಳಿಯ ಕಡಿದು ಬಂದೇವು
ಮತ್ತೆ ಮತ್ತೆ ಸ್ವಾರ್ಥ ದ ಜೊತೆ
ಭುವಿ , ನೀರು, ಗಾಳಿಯ ಜೊತೆ ;
ಪ್ರತಿದಿನ ಆಡಿದೆವು ಆಟವ,
ಒಂದೇ ಗುರಿ ಮನುಜಗೆ
ಮುಗಿಯದ ಆಸೆಗೆ .. ಮತ್ತಿಸ್ಟು ಬೆಸುಗೆ ಲೇಪನ ...
 
ಮನುಜನ ಆಸೆಗೆ ಎಂದು ಮುಕ್ತಾಯ
ಉಳಿಯುವುದೇ ಸೃಷ್ಟಿಯ ಕೊಡುಗೆ ..
 
 
 

Monday, 2 April 2012

ಹೊಸ ಸಂಬಂಧ

ಜೀವ ತುಡಿದು ಸೆಳೆಯಿತು ಹೊಸದು ಬಂಧಕೆ
ಹೃದಯ ಬಯಸಿ  ಬೆಳೆಯಿತು,ಭಾವ ವೀಣೆ ಮಿಡಿತಕೆ
ದೀಪ ಬೆಳಕು ಪ್ರಜ್ವಲಿಸಿತು , ಉರಿದು ಹೋಗೋ ಕೊನೆಯ ಹಂತಕೆ
ಮೂರ್ಖ ತನದಿ ಕನಸ ನೆಟ್ಟಿತು , ನವ್ಯತೆಯ ಭಾವಕೆ
ಬೇಡವೆಂದರೂ ಬೆಳೆಯ ಹತ್ತಿತು ಮನದ ಮಲ್ಲಿಗೆ ಗೂಡಲಿ
ಸೆಳೆಯಿತು ಭವಿಷ್ಯದ ಕನಸ ನಿರ್ಮಾಣದಲಿ
ಮೌನದಲ್ಲೇ ಅರಳಿತು , ಕಂಡ ಕನಸ  ಬೆಳಕಲಿ
ಹೊತ್ತಿತು ಹೊಸ ಕ್ರಾಂತಿ ಮನಸಿನ ತೊಯ್ದಾಟದಲಿ
ಭರವಸೆಯು ಚಿಲುಮೆಯಾಗಿ ಸೇರಿತು , ಮುಗ್ಧ ಮನದಲ್ಲಿ
ನೇಯ್ದ ಗೂಡು , ಬಣ್ಣದ ಲೇಪನದಲ್ಲಿ
ಮುಗಿಲ ಮಲ್ಲಿಗೆ ಸುಂದರ ಮಾಲೆಯಲ್ಲಿ
ಸುಂದರ ಸಂಬಂಧಕೆ ಅಲೆಯಾಗಿ ಹಾಡ ಗುನುಗುತಿತ್ತು ...
...........ಮಾಲಿನಿ ಭಟ್...............

ಜೀವಜಲ



ಬಿಸಿಲು ಕಾದು ನೆಲವು ಬರಿದಾಗಿದೆ
ಹಸಿರು ಮೊಳಕೆ ಅಲ್ಲೇ ಕರಗಿದೆ
ಜೀವಸೃಷ್ಟಿ ನೊಂದು ಕೊರಗಿದೆ
                 ಪುಟ್ಟ ಮನವು ಕರೆದಿದೆ

ಬರಡು ನೆಲದಿ , ಜೀವ ಸೆಲೆಯು ಉಕ್ಕಲಿ
ಬತ್ತಿ ಹೋದ ಮನಸಿನಲ್ಲಿ ಹೂವ ನಗುವು ಚೆಲ್ಲಲಿ
ಅಮೃತಧಾರೆ ನೀಡಲಿ ...
                          ಪುಟ್ಟ ಜೀವ ಬಯಸಿದೆ

ಜಲವು ನಮಗೆ ಅನ್ನದಾತ
ಜಲವು ನಮಗೆ ಜೀವಕಲ್ಪ
ಜಲವೇ ನಮ್ಮ ಭಾಗ್ಯದಾತ
                     
                           ಜೀವ ಜಲವ ಆವರಿಸಿದೆ

ಕಾಡು ಕಡಿದು , ನಾಶವಾಯ್ತು ವನದ ತಪ್ಪಲು
ಜೀವ ಕೋಟಿ ಮನದಿ ಶಾಪ ಇಟ್ಟರು
ಮೇಘರಾಜ ಹೆದರಿ ನಭದಿ ಹೊಕ್ಕಲು
                         
                             ಜಲಕೆ ವಿನಂತಿ  ತಲುಪಿದೆ

ವನವ ಬೆಳೆಸಿ , ಜೀವಶಕ್ತಿ ಉಳಿಸಿ
ನಾಶಮಾಡಿ ಕೊರಗದಿರು , ..


 ...........ಮಾಲಿನಿ ಭಟ್....